ಬೆಂಗಳೂರು ದಕ್ಷಿಣ ಕ್ಷೇತ್ರ ಅಭಿವೃದ್ಧಿಗೆ ಪಣ: ತೇಜಸ್ವಿ ಸೂರ್ಯ ಹೇಳಿಕೆ

yarapura
Published on

ಬೆಂಗಳೂರು: ನಾಗರಿಕರು ಸಹಕಾರ ನೀಡಿದರೆ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಜಯನಗರ ಕ್ಷೇತ್ರದ ಬಯಲು ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಮೂಲಸೌಕರ್ಯ ಕಲ್ಪಿಸಿದ್ದಾನೆ. ಇನ್ನಷ್ಟು ಸಮಸ್ಯೆ ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ನಾಗರಿಕರು ತಮ್ಮ ಮನೆ ಮುಂದೆ ಸ್ವಚ್ಛವಾಗಿಟ್ಟರೆ ಇಡೀ ವಾರ್ಡ್ ಸ್ವಚ್ಛವಾಗಲಿದೆ. ಹೀಗಾಗಿ, ಸ್ವಚ್ಛತೆ ಬಗ್ಗೆ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಶಾಸಕ ಸಿ.ಕೆ ರಾಮಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ವಾರ್ಡ್‌ವಾರು ‘ಪ್ಲಾಸ್ಟಿಕ್ ಮುಕ್ತ’ ಹಾಗೂ ‘ಕಸ ಮುಕ್ತ’ ಕಾರ್ಯಕ್ರಮ ನಡೆಸಲಾಗುವುದು. ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.

ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ಬಿಬಿಎಂಪಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ನಡೆದಿವೆ. ಜನರಿಂದ ಸ್ವೀಕರವಾಗಿರುವ ಸಮಸ್ಯೆಗಳನ್ನು ಈಡೇರಿಸಲಾಗುವುದು. ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಕ್ಷಿಣ ವಲಯದಲ್ಲಿ ಮೊದಲ ಬಾರಿ ಪ್ರತಿ ರಸ್ತೆಯಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಸಾರ್ವಜನಿಕರು ರಸ್ತೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಇದರ ಮುಖೇನ ಪಡೆಯ ಬಹುದು. ರಸ್ತೆಯಲ್ಲಿ ಗುಂಡಿಗಳಿದ್ದರೆ, ಪಾದಚಾರಿ ಮಾರ್ಗ, ಶಿಥಿಲ ಮರಗಳ ಸೇರಿ ಇತರ ಸಮಸ್ಯೆಗಳಿದ್ದರೆ ಕ್ಯೂ ಆರ್ ಕೋಡ್‌ನಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.

ಜಂಟಿ ಆಯುಕ್ತ ಡಾ.ಕೆ.ಜಗದೀಶ್ ನಾಯ್ಕ,ಬೆಸ್ಕಾಂ, ಜಲಮಂಡಳಿ, ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net