ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಬೆಂ-ಮೈ ಹೆದ್ದಾರಿ

IMG-20240523-WA0021
Published on

ಎತ್ತರ ಕಡಿಮೆಗೊಂಡ ರಸ್ತೆ ವಿಭಜಕಗಳು  ಬೈಕ್ ಸವಾರರ ಅಡ್ಡಾದಿಡ್ಡಿ ಚಾಲನೆ  ಪೂರ್ಣವಾಗದ ಕಾಮಗಾರಿ

* ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಹೊಸದಾಗಿ ಡಾಂಬರೀಕರಣ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಕೆಲವೆಡೆ ರಸ್ತೆ ವಿಭಜಕ  (ಡಿವೈಡರ್)  ಎತ್ತರ ಕಡಿಮೆ ಆಗಿದ್ದು, ಇದು ಅಪಘಾತಕ್ಕೆ ಆಹ್ವಾನ ನೀಡುವ ತೆಗೆ ವಾಹನ ಚಾಲಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ.

ಹೌದು., ನಗರದಲ್ಲಿ ಹಾದುಹೋಗಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹಳೇ ಹೆದ್ದಾರಿಗೆ ಇತ್ತೀಚೆಗೆ ಮರು ಡಾಂಬರೀಕರಣ ಮಾಡಲಾಗಿದೆ. ಬಿಡದಿಯಿಂದ ಶ್ರೀರಂಗಪಟ್ಟಣದವರೆಗೆ ಅಭಿವೃದ್ಧಿಪಡಿಸಲಾಗಿದೆ. ರಸ್ತೆ ಅಭಿವೃದ್ಧಿಪಡಿಸಿರುವುದು ಸಂತಸದ ವಿಚಾರವಾದರೆ, ಇದು ಕೆಲವು ಸಮಸ್ಯೆಗಳಿಗೂ ಕಾರಣವಾಗಿದೆ.

ಏನಾಗಿದೆ?:

ಹಳೇ ಹೆದ್ದಾರಿಯನ್ನು ಈಗಾಗಲೇ ಹಲವು ಬಾರಿ ಅಭಿವೃದ್ಧಿಪಡಿಸಲಾಗಿದೆ. ಈ ಮಧ್ಯೆ ಅದೇ ರಸ್ತೆಗೆ ಹೊಸದಾಗಿ ಇನ್ನೊಂದು ಪದರ ಡಾಂಬರೀಕರಣ ಮಾಡಿರುವುದರಿಂದ ಹಲವು ಕಡೆ ವಿಭಜಕಗಳು ಎತ್ತರ ಕಳೆದುಕೊಂಡು ರಸ್ತೆಗೆ ಸಮವಾಗಿದೆ. ಇದರಿಂದ ವಿಭಜಕ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ವಾಹನ ಸವಾರರಿಗೂ ಸಮಸ್ಯೆ ತಂದೊಡ್ಡಿದೆ.

ಡಿವೈಡರ್ ದಾಟಿಕೊಂಡು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಬರುವವರ ಸಂಖ್ಯೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಅಪಘಾತಗಳಿಗೂ ಕಾರಣವಾಗುತ್ತಿದೆ. ಅಲ್ಲದೇ ಡಾಂಬರೀಕರಣ ಮುಗಿದು ಹಲವು ದಿನ ಕಳೆದರೂ ರಸ್ತೆ ಸುರಕ್ಷಾ ಪಟ್ಟಿ (ವೈಟ್‌ಲೈನ್ಸ್) ಬಳಿದಿಲ್ಲ. ಇದು ಸುಗಮ ಸಂಚಾರ ವ್ಯವಸ್ಥೆಗೆ ತೊಡಕಾಗಿದೆ. ಆದಷ್ಟೂ ಬೇಗ, ಹೆದ್ದಾರಿಗೆ ವೈಜ್ಞಾನಿಕವಾಗಿ ವಿಭಜಕ ಅಳವಡಿಸುವ ತೆಗೆ, ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ ಎಂಬುದು ಸಾರ್ವಜನಿಕರ ಮನವಿ.

ಅಡ್ಡಾದಿಡ್ಡಿ ವಾಹನ ಚಾಲನೆ

ಸಾತನೂರು ಸರ್ಕಲ್ ಸೇರಿ ಹಲವು ಕಡೆ ಈ ಹಿಂದೆಯೇ ವಾಹನ ಸವಾರರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಿಭಜಕ ದಾಟುವುದು ಸಾಮಾನ್ಯವಾಗಿತ್ತು. ಸುತ್ತಿ ಬಳಸುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕೆಲ ದ್ವಿಚಕ್ರ ವಾಹನ ಸವಾರರು ಡಿವೈಡರ್ ದಾಟುವ ಸಾಹಸ ಮಾಡುತ್ತಿದ್ದರು. ಈಗ ಹಲವು ಕಡೆ ರಸ್ತೆ ವಿಭಜಕ ಮುಚ್ಚಿಕೊಂಡು ಸಮನಾಗಿರುವ ಹಿನ್ನೆಲೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುವವರು ಹೆಚ್ಚಾಗಿದ್ದಾರೆ. ತಾಲೂಕು ಕಚೇರಿ, ಸಾತನೂರು ಸರ್ಕಲ್, ಶೇರ್ವಾ ಸರ್ಕಲ್, ಬಸ್ ನಿಲ್ದಾಣ ಹಾಗೂ ಬೃಂದಾವನ ಹೋಟೆಲ್ ಮುಂಭಾಗ ಸೇರಿ ಹಲವೆಡೆ ಈ ರೀತಿ ಅಡ್ಡಾದಿಡ್ಡಿ ವಾಹನ ಚಾಲನೆ ಹೆಚ್ಚಾಗಿದೆ.

ಬಹುತೇಕ ಕಡೆ ಡಿವೈಡರ್ ರಸ್ತೆಗೆ ಸಮನಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದಾರೆ. ಇದು ಸುಗಮ ಸಂಚಾರಕ್ಕೆ ಸಾಕಷ್ಟು ತೊಡಕಾಗುತ್ತಿದೆ. ಹೆದ್ದಾರಿಗೆ ಹೊಸದಾಗಿ ಡಾಂಬರೀಕರಣ ಮಾಡಿರುವುದು ಒಳ್ಳೆಯದು. ಆದರೆ, ಉಂಟಾಗಿರುವ ಈ ಸಮಸ್ಯೆಯನ್ನು ಸಂಬಂಧಿಸಿದವರು ಶೀಘ್ರ ಬಗೆಹರಿಸಬೇಕು.

 ನಿತಿನ್, ವಾಹನ ಸವಾರ

ನಗರದಲ್ಲಿ ಹಾದುಹೋಗಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಕೆಲವೆಡೆ ರಸ್ತೆ ವಿಭಜಕ ಮುಚ್ಚಿಕೊಂಡಿರುವುದು ಸಂಚಾರ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ರಸ್ತೆ ವಿಭಜಕ ಮಾಡುತ್ತೇವೆ ಎಂದಿದ್ದಾರೆ. ಮತ್ತೊಮ್ಮೆ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯಲಾಗುವುದು.

 ರವಿಕಿರಣ್ , ನಗರ ಸಿಪಿಐ ಚನ್ನಪಟ್ಟಣ

ಬರಲಿದೆಯೇ ನ್ಯೂ ಜೆರ್ಸಿ ಬ್ಯಾರಿಯರ್?

ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ಕಾಮಗಾರಿಯಿಂದ ಹಲವೆಡೆ ರಸ್ತೆ ಡಿವೈಡರ್ ಮುಚ್ಚಿಹೋಗಿರುವ ಬಗ್ಗೆ ಸಂಬಂಧಿಸಿ ಎನ್.ಎಚ್.(ಪಿಡಬ್ಲ್ಯುಡಿ) ಎಇಇ ಪ್ರಕಾಶ್ ಎಂಬುವವರನ್ನು ಪತ್ರಿಕೆ ಸಂಪರ್ಕಿಸಿದಾಗ, ಈ ಸಮಸ್ಯೆ ಮುಕ್ತಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಮಾದರಿಯ ನ್ಯೂ ಜೆರ್ಸಿ ಬ್ಯಾರಿಯರ್ ಅಳವಡಿಸುತ್ತೇವೆ.

ಈ ವಿಭಜಕ ವೈಜ್ಞಾನಿಕವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆ ಯಾವುದೇ ಕಾರಣಕ್ಕೂ ವಾಹನಗಳು ದಾಟಲು ಅವಕಾಶ ಇರುವುದಿಲ್ಲ. ರಸ್ತೆ ಸುರಕ್ಷೆ ವಿಚಾರದಲ್ಲಿ ಈ ಮಾದರಿಯ ಬ್ಯಾರಿಯರ್ ಉತ್ತಮವಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷಾ ಪಟ್ಟಿಗಳನ್ನು (ವೈಟ್‌ಲೈನ್ಸ್) ಬಳಿಯಲು ಸಮಸ್ಯೆಯಾಗುತ್ತಿದೆ. ಎಲ್ಲವೂ ಕೆಲದಿನಗಳಲ್ಲಿ ಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net