

* ಎಸ್.ಬಿ. ದೊಡ್ಡಿ-ಬೈರಾಪಟ್ಟಣದ ಬೈಪಾಸ್‌ನಲ್ಲಿರುವ ಕಿರು ಬೆಟ್ಟಗಳು
* ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುನ್ನೆಚ್ಚರಿಕೆ ಅಗತ್ಯ
ಗಂಗಾಧರ್ ಬೈರಾಪಟ್ಟಣ ರಾಮನಗರ
ಮಳೆಗಾಲ ದೇಶದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಡುವೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಗೂ ಭೂಕುಸಿತದ ಛಾಯೆ ಆವರಿಸಿದೆ.
ರಾಮನಗರ ಸಂಗಬಸವನದೊಡ್ಡಿಯಿಂದ ಆರಂಭಗೊಂಡು ಚನ್ನಪಟ್ಟಣದ ಬೈರಾಪಟ್ಟಣದವರೆಗೆ 24 ಕಿಮೀ ಬೈಪಾಸ್ ಅನ್ನು ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ನಿರ್ಮಿಸಲಾಗಿದೆ. ಈ ಬೈಪಾಸ್ ಅನ್ನು ಬಹುತೇಕ ಬೆಟ್ಟಗುಡ್ಡಗಳನ್ನು ಕಡಿದು ನಿರ್ಮಾಣ ಮಾಡಲಾಗಿದೆ. ಈ ರಸ್ತೆ
ಮಳೆಗಾಲದಲ್ಲಿ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಆದರೆ, ಅವೈಜ್ಞಾನಿಕವಾಗಿ ಕಡಿದಿರುವ ಬೆಟ್ಟ ಗುಡ್ಡಗಳು ಮಾತ್ರ ಪ್ರಯಾಣಿಕರ ಪಾಲಿಗೆ ಸುರಕ್ಷಿತವಾಗಿಲ್ಲ. ರಾಮನಗರ ದೇವರ ಬೆಟ್ಟದ ಆಸುಪಾಸು, ಕೆಂಪೇಗೌಡನದೊಡ್ಡಿ, ಬಿಳಗುಂಬ, ಕಣ್ವ ರಸ್ತೆ, ದೇವರಹೊಸಳ್ಳಿ ಜೈಪುರ ಬಳಿ ಬೆಟ್ಟಗಳನ್ನು ಕಡಿದು ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಇವು ಅಪಾಯದ ಮುನ್ಸೂಚನೆ ನೀಡಿವೆ.