

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದಂದು ದೇಶಾದ್ಯಂತ ಆರಂಭವಾಗಿರುವ ಬೃಹತ್ ಲಸಿಕೆ ಅಭಿಯಾನ ಇನ್ನೂ ಮುಂದುವರಿದಿದ್ದು, ಪ್ರಾರಂಭವಾದ ದಿನದಿಂದಲೂ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಲಸಿಕೆ ಕುರಿತು ಅಪಪ್ರಚಾರ ನಡೆದಿರುವ ನಡುವೆಯೂ ಭಾರಿ ಪ್ರಮಾಣದಲ್ಲಿ ಜನರು ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 2,55,14,890 ಡೋಸ್ ಲಸಿಕೆ ಕೊಡಲಾಗಿದ್ದು, ಇವತ್ತೊಂದೇ ದಿನ ಅಂದರೆ ಜುಲೈ 10ರಂದು ರಾತ್ರಿ 9 ಗಂಟೆಯವರೆಗೆ 2,34,267 ಡೋಸ್ ಲಸಿಕೆ ನೀಡಲಾಗಿದೆ. ಅದರಲ್ಲೂ ಕರೊನಾ ಲಸಿಕೀಕರಣದಲ್ಲಿ ಇಂದು ರಾಜ್ಯದಲ್ಲಿ ಎಲ್ಲರಿಗಿಂತ ಮುಂದು ಎಂಬ ಹೆಗ್ಗಳಿಕೆಗೆ ಬೆಂಗಳೂರು ಹಾಗೂ ಮಂಗಳೂರು ಪಾತ್ರವಾಗಿವೆ.
ರಾಜ್ಯದಲ್ಲಿ ಇಂದು ನಡೆದ ಲಸಿಕೀಕರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅತಿಹೆಚ್ಚು ಎಂದರೆ 85,806 ಡೋಸ್, ದಕ್ಷಿಣಕನ್ನಡದಲ್ಲಿ 17,765 ಡೋಸ್ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ 15,985 ಡೋಸ್ ಲಸಿಕೆ ನೀಡಲಾಗಿದೆ. ಇನ್ನು ಬೃಹತ್ ಲಸಿಕೆ ಆರಂಭವಾದ ಮೊದಲ ದಿನವೇ ದೇಶದಲ್ಲಿ ಅತಿಹೆಚ್ಚು ಲಸಿಕೆ ಹಾಕಿಸಲಾದ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನ ಗಳಿಸಿತ್ತು.