ವಿಶ್ವದ ಮುಂಚೂಣಿ ನಗರಗಳ ಸಾಲಿನಲ್ಲಿ ಬೆಂಗಳೂರು

27.ಪಿ ವೈ ಪಿ. 01
Published on

ಪಿರಿಯಾಪಟ್ಟಣ: ಒಂದು ನಗರದ ಅಭಿವೃದ್ಧಿಗೆ ಅಗತ್ಯವೇನು ಎಂಬುದನ್ನು ಕೆಂಪೇಗೌಡರು ಅರಿತ್ತಿದ್ದರಿಂದ ಬೆಂಗಳೂರು ಇಂದು ವಿಶ್ವದ ಮುಂಚೂಣಿಯಲ್ಲಿರುವ ನಗರಗಳಲ್ಲಿ ಒಂದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಿ ವಿಶ್ವದರ್ಜೆಯ ಸ್ಥಾನಮಾನ ಪಡೆಯಲು ಕಾರಣವಾದ ಶ್ರೇಷ್ಠ ಆಡಳಿತಗಾರ ನಾಡಪ್ರಭು ಕೆಂಪೇಗೌಡರು. ಪ್ರತಿ ಸಮುದಾಯಕ್ಕೂ ಅವರ ವೃತ್ತಿಗನುಗುಣವಾಗಿ ಕುಂಬಾರಪೇಟೆ, ತಿಗಳರ ಪೇಟೆ, ಬಳೆಪೇಟೆ ಸೇರಿದಂತೆ ವಿವಿಧ ಹೆಸರಿನ ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ, ವ್ಯಾಪಾರ ವಹಿವಾಟಿಗೆ ಒತ್ತು ನೀಡುವ ಮೂಲಕ ಬೆಂಗಳೂರಿನ ವ್ಯಾಪಾರಸ್ಥರಿಗೆ ಆರ್ಥಿಕ ಚೈತನ್ಯ ತುಂಬಿದ್ದರು ಎಂದು ಸ್ಮರಿಸಿದರು.

ಶಿಕ್ಷಕ ಸಿ.ಕೆ.ಕುಮಾರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯಕ್ಕೆ ಬಹಳ ನಿಷ್ಠೆಯಿಂದ ಇದ್ದ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಲು ನಿಶ್ಚಯಿಸಿ ವಿಜಯನಗರ ಸಾಮ್ರಾಜ್ಯದ ಅರಸ ಅಚ್ಚುತರಾಯರ ಒಪ್ಪಿಗೆ ಪಡೆದು 1537ರಲ್ಲಿ ನಗರ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪಿಸಿದ್ದರು. ಅವರು ಬೆಂಗಳೂರನ್ನು ಕಟ್ಟುವಾಗ ಪ್ರಮುಖ ಆದ್ಯತೆಯಾಗಿ ಕೋಟೆಗಳು, ಪೇಟೆಗಳು, ಕೆರೆಗಳು, ಉದ್ಯಾನವನಗಳು ಮತ್ತು ಗುಡಿಗಳಿಗೆ ಪ್ರಾಮುಖ್ಯ ನೀಡಿದ್ದರು ಎಂದರು.

ಹಲವಾರು ಉದ್ಯಾನಗಳು, ಕೆರೆಗಳನ್ನು ನಿರ್ಮಿಸುವ ಮೂಲಕ ಇಂದಿಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗುವಂತೆ ದೂರದೃಷ್ಟಿ ಹೊಂದಿದ್ದ ಮಹಾನ್ ಚಿಂತಕ. ಅವರು ಜಾರಿಗೆ ತಂದಿದ್ದ ಆರ್ಥಿಕ ನೀತಿ, ಆಡಳಿತ ನೀತಿ ಇಂದಿಗೂ ಪ್ರಸ್ತುತವಾಗಿದೆ. ಸುಮಾರು 500 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಬೆಂಗಳೂರು ನಗರ ಇಂದು ವಿಶ್ವದಲ್ಲಿಯೇ ಪ್ರಮುಖ ನಗರವಾಗಿ ಬೆಳೆದಿದೆ. ನಗರದ ನಾಲ್ಕು ದಿಕ್ಕುಗಳಲ್ಲಿಯೂ ಗಡಿಗಳನ್ನು ಗುರುತು ಮಾಡಿ ಕೋಟೆ ನಿರ್ಮಾಣ ಮಾಡಿದ್ದರು. ಸಾರ್ವಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿ ಎಂದು ಹಲವು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಇಂದು ಕೆಲವು ಕೆರೆಗಳು ಸಾರ್ವಜನಿಕರಿಂದ ಅತಿಕ್ರಮಣಗೊಂಡು ಬಡಾವಣೆಗಳಾಗಿವೆ ಎಂದು ವಿಷಾದಿಸಿದರು.

ಶಿರಸ್ತೇದಾರ ಶಕೀಲಬಾನು, ಉಪತಹಸೀಲ್ದಾರ್ ವಿನೋದ್ ಕುಮಾರ್, ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಉದಯ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಶಶಿಧರ್, ಭೂಮಾಪನ ಇಲಾಖೆಯ ಕುಮಾರ್, ಪುರಸಭೆ ಸದಸ್ಯ ರವಿ, ಕೆಂಪೇಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಅನಂತ, ಪಿಎಸ್‌ಐ ಸುರೇಶ್, ರಮೇಶ್, ಪುಟ್ಟರಾಜು, ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net