

ಮಾಗಡಿ: ಸಮೃದ್ಧ ಕೃಷಿ ವಿಕಸಿತ ಭಾರತ&ನೆಲ,ಜಲ, ಬೆಳೆ ಎಂಬ ಶೀರ್ಷಿಕೆಯಡಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ನ.13ರಿಂದ 16ರವರೆಗೆ ಕೃಷಿಮೇಳ- ಆಯೋಜಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ತಿಳಿಸಿದರು.
ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಬೆಂಗಳೂರು ಕೃಷಿ ವಿವಿ ಭವಿಷ್ಯದ ಕೃಷಿ ರಾಷ್ಟ್ರದ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾದ ನೆಲ, ಜಲ ಹಾಗೂ ಜೀವ ವೈವಿಧ್ಯತೆಗಳನ್ನು ವೈಜ್ಞಾನಿಕವಾಗಿ, ಜವಾಬ್ದಾರಿಯುತವಾಗಿ ಬಳಸಿ, ಸಂರಕ್ಷಿಸುವ ಮೂಲಕ ಸುಸ್ಥಿರ ಕೃಷಿ ಹಾಗೂ ಕೃಷಿಕರ ಆದಾಯ ವೃದ್ಧಿ ಆಶಯದೊಂದಿಗೆ ಮೇಳಹಮ್ಮಿಕೊಂಡಿದೆ. ವಿಕಸಿತ ಭಾರತದ ಪರಿಕಲ್ಪನೆಗೆ ಕೃಷಿ ಕ್ಷೇತ್ರದ ಕೊಡುಗೆಯನ್ನು ಪ್ರತಿಪಾದಿಸುವ ವಿಶೇಷ ವೇದಿಕೆಯನ್ನು ಈ ಮೇಳ ಕಲ್ಪಿಸಲಿದೆ ಎಂದರು.
ಭಾರತದ ಜಲಾನಯನ ಅಭಿವೃದ್ಧಿ ಕುರಿತಾದ ಸಂಶೋಧನೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಮೂಂಚೂಣಿಯಲ್ಲಿದ್ದು,
ಹಲವು ಜಲಾನಯನ ಮಾದರಿಗಳನ್ನು ಅಭಿವೃದ್ಧಿಪಡಿಸಿ, ದೇಶದಲ್ಲೇ ಮೊದಲ ಜಲಾನಯನ ಅಭಿವೃದ್ಧಿ ಇಲಾಖೆಯನ್ನು ರಾಜ್ಯದಲ್ಲಿ ಆರಂಭಿಸಲು ವಿಶ್ವವಿದ್ಯಾನಿಲಯದ ಕೊಡುಗೆ ಅನನ್ಯ ಎಂದರು.
ಬಹುತೇಕ ಮಳೆಯಾಶ್ರಿತ ಕೃಷಿಯನ್ನು ಅವಲಂಬಿಸಿರುವ ರಾಜ್ಯದಲ್ಲಿ ಕಳೆದ ಐದು ದಶಕಗಳಿಂದ ಒಣಭೂಮಿ ಸಂಶೋಧನಾ ಪ್ರಾಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ನಿರಂತರ ಮಳೆಯಾಶ್ರಿತ ಬೆಳೆ, ಬೆಳೆ ಪದ್ಧತಿಗಳ ಕುರಿತಾದ ಸಂಶೋಧನೆಗಳಿಂದ ಸುಸ್ಥಿರ ಉತ್ಪಾದನೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸರ್ಕಾರದ ನೀತಿ, ನಿರೂಪಣೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿಯೂ ನಿರ್ಣಾಯಕ ಪಾತ್ರವಹಿಸಿದೆ ಎಂದರು.
ವಸ್ತುಪ್ರದರ್ಶನ
ವಿವಿಯ ಹಲವು ತಳಿ ತಂತ್ರಜ್ಞಾನಗಳು ರಾಜ್ಯದ ಒಟ್ಟಾರೆ ಉತ್ಪಾದನೆ-ಯ ಉತ್ಪಾದಕತೆ ಹೆಚ್ಚಿಸುವಲ್ಲಿ ನೆರವಾಗಿದ್ದು, ಸಮೃದ್ಧ ಕೃಷಿಯತ್ತ ದಿಟ್ಟ ಹೆಜ್ಜೆಯಿಟ್ಟ ಹಿನ್ನಲೆ, ಇದಕ್ಕೆ ಪೂರಕವಾದ ತಂತ್ರಜ್ಞಾನಗಳ ಪ್ರದರ್ಶನ ಹಾಗೂ ಮಾಹಿತಿ ಪೂರೈಕೆಗೆ ಕೃಷಿಮೇಳ ಪ್ರಶಸ್ತ ವೇದಿಕೆಯೊಂದನ್ನು ಕಲ್ಪಿಸಿಕೊಡಲಿದೆ. ಇದರ ಜತೆ ಕೃಷಿಕರ ಸಾಂಪ್ರದಾಯಿಕ ಆದಾಯ ಮೂಲಗಳ ಹೊರತಾಗಿ ಹೊಸಗಳಿಕೆಯ ಹಾದಿಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಕೃಷಿ ಕ್ಷೇತ್ರದ ಕುರಿತು ಆಸಕ್ತಿ ಮೂಡಿಸಲು ಕೃಷಿ ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಪರಿಚಯಿಸುವ ಪ್ರಯತ್ನಕ್ಕೆ ಮೇಳ ಸಾಕ್ಷಿಯಾಗಲಿದೆ. ಈ ಉದ್ದೇಶಕ್ಕಾಗಿ ಕೃಷಿ ಪ್ರವಾಸೋದ್ಯಮದ ಆಕರ್ಷಕ ಮಾದರಿಯೊಂದನ್ನು ಪರಿಚಯಿಸಲು ಕೃಷಿ ವಿಶ್ವವಿದ್ಯಾನಿಲಯ ಸಜ್ಜಾಗುತ್ತಿದೆ. ಮೇಳವು ಬೃಹತ್ ವಸ್ತುಪ್ರದರ್ಶನ, ಬೆಳೆ ಪ್ರಾತ್ಯಕ್ಷಿಕೆಗಳು, ಚರ್ಚಾಗೋಷ್ಠಿಗಳು, ಸಲಹಾ ಸೇವೆ, ಸಾಧಕ ಕೃಷಿಕರಿಗೆ ಪ್ರಶಸ್ತಿ ಪ್ರದಾನ, ಗ್ರಾಮೀಣ ಕಲೆ, ಸಂಸತಿಗೆ ವೇದಿಕೆಯಾಗಲಿದೆ ಎಂದು ಶಿವಲಿಂಗಯ್ಯ ತಿಳಿಸಿದರು.
ಸಮೇತಿ (ದಕ್ಷಿಣ) ರಾಜ್ಯ ನೋಡಲ್ ಅಧಿಕಾರಿ ಡಾ.ನಾರಾಯಣರೆಡ್ಡಿ ಮಾತನಾಡಿ, ಕೃಷಿಮೇಳದಲ್ಲಿ ಆಸಕ್ತ ಉದ್ಯಮದಾರರಿಗೆ ಪ್ರದರ್ಶನ ಮಳಿಗೆಗಳನ್ನು ಹಾಕಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಎಸ್.ಶ್ವೇತಾ ಮಾತನಾಡಿದರು.