

ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮದ ರೈತನ ಪುತ್ರನೊಬ್ಬ ಸಾಕಿದ್ದ ಬಂಡೂರು ತಳಿಯ ಎಂಟು ತಿಂಗಳ ಎರಡು ಗಂಡು ಕುರಿ ಮರಿಗಳನ್ನು ಬರೋಬರಿ 1.60 ಲಕ್ಷ ರೂ. ಗೆ ಮಾರಾಟವಾಗಿದೆ.
ಗ್ರಾಮದ ಮನೋಹರ್ ಪುತ್ರ ಉಲ್ಲಾಸ್ ಗೌಡ ಎಂಬ ಯುವಕ ಶಿಕ್ಷಣದ ಜತೆಗೆ ಕುರಿ ಸಾಕಣೆ ಮಾಡುತ್ತಿದ್ದಾರೆ. ಈ ಯುವಕ ತಾವು ಸಾಕಿದ್ದ ಬಂಡೂರು ತಳಿಯ ಕುರಿ ಜನ್ಮ ನೀಡಿದ್ದ 8 ತಿಂಗಳ ಎರಡು ಗಂಡು ಜಾತಿಯ ಟಗರು ಕುರಿ ದಾಖಲೆ ಬೆಲೆಗೆ ಮಾರಾಟವಾಗಿದೆ.
ಬಂಡೂರು ತಳಿಯ ಕುರಿಗಳು ದಕ್ಷಿಣ ಕರ್ನಾಟಕದಲ್ಲಿ ಬಹಳ ಬೇಡಿಕೆಯ ಹಾಗೂ ವಿಶೇಷತೆ ಹೊಂದಿದ್ದು, ಮನೆಯಲ್ಲೇ ಹುಟ್ಟಿದ್ದ ಕುರಿಯನ್ನು ಮುತುವರ್ಜಿಯಿಂದ ಸಾಕಣೆ ಮಾಡಿದ್ದರು. ತಾಲೂಕಿನ ವಡ್ಡರಹಳ್ಳಿ ಗ್ರಾಮದ ಅನಿಲ್ ಕುಮಾರ್ ಎಂಬುವರು ತಳಿ ಅಭಿವೃದ್ಧಿಗಾಗಿ ಟಗರು ಕುರಿಗೆ ತಲಾ ಒಂದಕ್ಕೆ 80 ಸಾವಿರ ರೂ. ಬೆಲೆ ನೀಡಿ ಎರಡು ಟಗರು ಕುರಿಗಳಿಗೆ 1.60 ಲಕ್ಷ ರೂಗೆ ಖರೀದಿಸಿದ್ದಾರೆ.
ಮಂಗಳವಾರ ಮಾರಾಟವಾದ ಟಗರು ಕುರಿಗಳಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ ನಂತರ ಅನಿಕ್ ಕುಮಾರ್ ಅವರಿಗೆ ಕುರಿಗಳ ಮಾಲೀಕ ಉಲ್ಲಾಸ್ ಗೌಡ ಹಸ್ತಾಂತರಿಸಿದರು.
ರೈತ ಮನೋಹರ್, ಗ್ರಾಮದ ಮುಖಂಡರಾದ ಬೊಕಳೆಗೌಡ, ಮಾದೇವ, ಕುಮಾರ್, ಕುಳ್ಳೇಗೌಡ, ಪುಟ್ಟಸ್ವಾಮಿ, ಚೇತನ ಇದ್ದರು.