

ಬಾಗೇಪಲ್ಲಿ: ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಡಕಾಯತಿ, ಕೊಲೆ, ಕಿಡ್ನಾಪ್ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಡಕಾಯಿತ ಬಾಂಬೆ ಸಲೀಂ ಹಾಗೂ ಆತನ 7 ಸಹಚರರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಡೀ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತರಿಂದ 5.15 ಲಕ್ಷ ರೂ. ನಗದು, 30 ಲಕ್ಷ ರೂ. ಬೆಲೆಬಾಳುವ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಬಾಂಬೆ ಸಲೀಂ ಹಾಗೂ ಗುಡಿಬಂಡೆ, ಬಾಗೇಪಲ್ಲಿ, ರಾಜಾನುಕುಂಟೆ, ಬೆಂಗಳೂರು ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್ಗಳಾದ ಬಾಗೇಪಲ್ಲಿಯ ಚೇತನ್, ಗುಡಿಬಂಡೆಯ ಬಾಬುರೆಡ್ಡಿ, ರಾಜಾನುಕುಂಟೆಯ ನಾಗೇಶ್, ಬೆಂಗಳೂರಿನ ವಸೀಮ್ ಮತ್ತು ಸಹಚರರಾದ ಚೇತನ್, ಅನಿಲ್, ಅಸ್ಲಾಂ ಸೇರಿ ಎಂಟು ಡಕಾಯಿತರು ಆದಿಗಾನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಎಂಬುವರ ಕಾರನ್ನು ಅಡ್ಡಗಟ್ಟಿ 16 ಲಕ್ಷ ರೂ. ದೋಚಿ ಆತನನ್ನು ಕಿಡ್ನಾಪ್ ಮಾಡಿ ಆತನ ಪತ್ನಿಗೆ ಕರೆ ಮಾಡಿ ಬೆದರಿಸಿ 50 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.
ಅಶ್ವತ್ಥನಾರಾಯಣಸ್ವಾಮಿ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬಾಗೇಪಲ್ಲಿ ಪೋಲೀಸರು, ಎಸ್ಪಿ ಕುಶಾಲ್ ಚೌಕ್ಸೆ ಸೂಚನೆಯಂತೆ ಸರ್ಕಲ್ ಇನ್ಸ್ಪೆಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಾಂಬೆ ಸಲೀಂ ಸೇರಿ ಇತರ 8 ಮಂದಿಯನ್ನು ಬಂಧಿಸಿ, ಡಕಾಯಿತರ ಬಳಿ ಇದ್ದ ಕಾರು, ಎಟಿಎಂ ಕಾರ್ಡ್, ಹಣ, ದ್ವಿಚಕ್ರ ವಾಹನ, ಮಾರಕಾಸಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಇನ್ಸ್ಪೆಕ್ಟರ್ಗಳಾದ ನಾಗಮ್ಮ, ಮುನಿರತ್ನಂ, ಪೇದೆಗಳಾದ ಸುರೇಶ್, ವೆಂಕಟರವಣ, ಶ್ರೀನಾಥ, ಶ್ರೀಪತಿ, ಧನುಂಜಯ, ಮೋಹನ್ ಕುಮಾರ್, ಸಾಗರ್, ವೆಂಕಟಶಿವ, ಖದೀರ್ ಮಹಮದ್, ನೂರ್ಬಾಷಾ ಇದ್ದರು.
ಯಾರು ಈ ಬಾಂಬೆ ಸಲೀಂ?: ಅಂತಾರಾಜ್ಯ ಡಕಾಯಿತ ಬಾಂಬೆ ಸಲೀಂ ಮೂಲತಃ ಮಹಾರಾಷ್ಟ್ರದವನಾಗಿದ್ದು, 12 ವರ್ಷದವನಾಗಿದ್ದಾಗಲೇ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನನ್ನೆ ಕೊಲೆ ಮಾಡಿ ಜೈಲುಶಿೆ ಅನುಭವಿಸಿದ್ದ. ಅಂದಿನಿಂದ ಇದುವರೆಗೂ ಅದೇ ವೃತ್ತಿಯಲ್ಲಿ ತೊಡಗಿಸಿಕೊಂಡು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಾಂಬೆ ಸಲೀಂ ವಿರುದ್ದ 5 ಕೊಲೆ, 4 ಡಕಾಯಿತಿ, 2 ಸುಲಿಗೆ, 2 ಕಿಡ್ನಾಪ್ ಪ್ರಕರಣ ಹಾಗೂ ಕಳವು ಪ್ರಕರಣಗಳು ಸೇರಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಾಂಬೆ ಸಲೀಂ ಮೂರು ರಾಜ್ಯಗಳ ಪೊಲೀಸರಿಗೆ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ.
ಬಾಂಬೆ ಸಲೀಂ ವಿರುದ್ಧ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲೂ ಪ್ರಕರಣ ದಾಖಲಾಗಿವೆ. ಜೈಲಿನಲ್ಲಿದ್ದಾಗ ಬಾಂಬೆ ಸಲೀಂ ಪರಿಚಯ ಬೆಳೆಸಿಕೊಂಡಿದ್ದ ಬಾಗೇಪಲ್ಲಿ ಮತ್ತು ಗುಡಿಬಂಡೆಯ ಕೆಲ ರೌಡಿಶೀಟರ್ಗಳು ಸ್ಥಳಿಯವಾಗಿ ನೀಡಿದ ಮಾಹಿತಿ ಆಧಾರದಲ್ಲಿ ಅಶ್ವತ್ಥನಾರಾಯಣಸ್ವಾಮಿ ಕಾರು ಅಡ್ಡಗಟ್ಟಿ ಹಣ ದೋಚಿ ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಸಲೀಂ ಸೇರಿ 7 ಸಹಚರರನ್ನು ಬಾಗೇಪಲ್ಲಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. | ಕುಶಾಲ್ ಚೌಕ್ಸೆ, ಜಿಲ್ಲಾ ಪೊ ಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ