ಬಂದ್ ಆಯ್ತು ಚೇಳೂರು ವಿಎಸ್ಸೆಸ್ಸೆನ್!

FotoJet (3)
Published on

ಕಾರ್ಯದರ್ಶಿ ವಿರುದ್ಧ ದೂರು ನೀಡಿದರೂ ಕ್ರಮವಿಲ್ಲ | ಹೊಸ ಸಿಬ್ಬಂದಿ ನೇಮಕಕ್ಕೆ ರೈತರು, ಸೀಶಕ್ತಿ ಸಂಘಗಳ ಮನವಿ


ಜೆ.ಕೆ. ಆನಂದ್ ಚೇಳೂರು
ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘವು ಮುಚ್ಚಿದ್ದು, ಕಚೇರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ತಾಲೂಕು ಕೇಂದ್ರ ಚೇಳೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಆದರೆ, ಒಂದು ವರ್ಷಕ್ಕೂ ಹೆಚ್ಚು ದಿನದಿಂದ ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ ಬಾಗಿಲು ಬಂದ್ ಆಗಿದೆ.
ಸೀ ಶಕ್ತಿ ಮಹಿಳಾ ಸಂಘದ ಸದಸ್ಯರು, ಕೃಷಿ ಸಾಲ ಪಡೆಯುವವರು ಹಣ ಕಟ್ಟಿದ್ದು, ಇವರಿಗೆ ಕೃಷಿ ಸಾಲ ಮತ್ತಿತರ ಸಾಲ ನೀಡದ ಕಾರಣ ಸಂಘದ ಕಚೇರಿ ಎದುರು ಗಲಾಟೆಗಳು, ಪ್ರತಿಭಟನೆಗಳು ನಡೆದಿವೆ. ಸಂಘದ ಕಾರ್ಯದರ್ಶಿ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ.
ಗಲಾಟೆಗಳಾಗಿ, ದೂರು ನೀಡಿದ್ದರೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಗ್ರಾಮೀಣ ರೈತಾಪಿ ಜನರಿಗೆ ಡಿಸಿಸಿ ಬ್ಯಾಂಕ್‌ನಿಂದ ಲಕ್ಷಾಂತರ ರೂಪಾಯಿ ಸಾಲ ನೀಡಿ ಅಭಿವೃದ್ಧಿ ಮಾಡಲು ಸೂಚಿಸಿದರೆ, ಇದಕ್ಕೆ ವಿರುದ್ಧವಾಗಿ ಇಲ್ಲಿನ ಸಂಘದ ಪ್ರಗತಿ ಶೂನ್ಯವಾಗಿದೆ. ಕೆಲ ರೈತರಿಂದ ಹಣ ಪಡೆದು, ಕೃಷಿ ಸಾಲ ನೀಡಿ ಮತ್ತೆ ಕಟ್ಟಿಸಿಕೊಂಡು ನವೀಕರಣ ಮಾಡಿಸುವುದಾಗಿ ಹೇಳಿ, ಹಣವನ್ನೂ ನೀಡದೆ, ನವೀಕರಣವನ್ನೂ ಮಾಡಿಲ್ಲ. ಪಹಣಿಯಲ್ಲಿ ಮಾತ್ರ ಆಧಾರ ಎಂದು ನಮೂದಿಸಿ ಕೈತೊಳೆದುಕೊಂಡಿರುವುದು ಹಲವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ನೂತನ ಡಿಸಿಸಿ ಬ್ಯಾಂಕ್
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ 13 ನೂತನ ಡಿಸಿಸಿ ಬ್ಯಾಂಕ್ ಶಾಖೆಗಳ ಆರಂಭಕ್ಕೆ ಸಹಕಾರ ಇಲಾಖೆ ಅನುಮತಿ ನೀಡಿದೆ. ಈ ಪಟ್ಟಿಯಲ್ಲಿ ಚೇಳೂರು ಕೂಡ ಸೇರಿದೆ. ಅಂತೆಯೇ, ಇರುವ ಸೊಸೈಟಿಯನ್ನು ಪುನರಾರಂಭಿಸಿದರೆ ಹೆಚ್ಚಿನ ಅನುಕೂಲವಾಗಲಿದೆ.

ಮಹಿಳೆಯರಿಗೆ ನೀಡಿರುವ ಸಾಲ ಹಾಗೂ ಸಂಘದ ಮೇಲೆ ಹಾಕಿರುವ ಠೇವಣಿ ಸೇರಿ ಲಕ್ಷಾಂತರ ರೂ.ಗಳನ್ನು ಕಾರ್ಯದರ್ಶಿ ದುರ್ಬಳಕೆ ಮಾಡಿಕೊಂಡಿದ್ದು, ಈಗ ನಾಪತ್ತೆಯಾಗಿದ್ದಾರೆ. ಇದರಿಂದ ಹಲವಾರು ಮಹಿಳೆಯರು ಬೀದಿ ಪಾಲಾಗಿದ್ದಾರೆ. ಅವರ ಮನೆಯಲ್ಲಿ ಕೇಳಿದರೆ ನಮ್ಮ ವಿರುದ್ಧವೇ ದೂರು ನೀಡುವುದಾಗಿ ಹೆದರಿಸುತ್ತಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.-ಾತಿಮಾಮಹಿಳಾ ಸಂಘದ ಮುಖ್ಯಸ್ಥೆ

ಚೇಳೂರು ತಾಲೂಕು ಕೇಂದ್ರವಾಗಿದ್ದರೂ ಸಹಕಾರ ಸಂಘದ ಬದಲಾಗಿ ಬ್ಯಾಂಕ್ ಆರಂಭಿಸಿಲ್ಲ. ಸುಸಜ್ಜಿತ ಕಟ್ಟಡವಿದ್ದರೂ ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ. ರೈತರು, ಮಹಿಳೆಯರಿಂದ ಹಣ ಕಟ್ಟಿಸಿಕೊಂಡು ಅನ್ಯಾಯ ಮಾಡಲಾಗಿದೆ. ಇಲ್ಲಿರುವ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ಹೊಸಬರನ್ನು ನೇಮಕ ಮಾಡುವುದು ಉತ್ತಮ.- ಶ್ರೀರಾಮಪ್ಪ, ರೈತ, ಚೇಳೂರು

ಚೇಳೂರಿನಲ್ಲಿ ಸೊಸೈಟಿಗೆ ಒಳ್ಳೆಯ ಕಟ್ಟಡ ಇರಲಿಲ್ಲ. ಹಳೆಯ ಕಟ್ಟಡವನ್ನು ರಿಪೇರಿ ಮಾಡಿಸಿ ಅಕ್ರಮ ಪೆಟ್ಟಿಗೆಗಳನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳು, ಶಾಸಕರು, ಸಚಿವರ ಸಹಕಾರದೊಂದಿಗೆ ಈಗಿರುವ ಸೊಸೈಟಿ ಜತೆಗೆ ಡಿಸಿಸಿ ಬ್ಯಾಂಕ್ ಸಹ ಆರಂಭಿಸಲಾಗುವುದು.- ಮಹಮದ್ ಗೌಸ್, ನಿರ್ದೇಶಕ, ವ್ಯವಸಾಯ ಸೇವಾ ಸಹಕಾರ ಸಂಘ, ಚೇಳೂರು

ಚೇಳೂರಿನ ಸೊಸೈಟಿಗೆ ಹೊಸ ಸಿಬ್ಬಂದಿ ನೇಮಕ ಮಾಡಲಾಗುವುದು. ಶೀಘ್ರದಲ್ಲೇ ಬ್ಯಾಂಕ್ ಕೂಡ ಆರಂಭಿಸಲಾಗುವುದು. ರೈತರು ಸಹಕಾರ ನೀಡಿ ಅಭಿವೃದ್ಧಿಗೆ ಕೈಜೋಡಿಸಬೇಕು.- ಚೇತನ್, ಮ್ಯಾನೇಜರ್, ಡಿಸಿಸಿ ಬ್ಯಾಂಕ್, ಬಾಗೇಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net