ಅಷಾಢ ಕೊನೇ ಶುಕ್ರವಾರ ದೇವಿ ದೇವಾಲಯಗಳಲ್ಲಿ ಭಕ್ತರ ಸಾಲು

Sudhee_02_Ashada_Pooja_@_BSK_Temple (4)
Published on

ಬೆಂಗಳೂರು: ಆಷಾಢ ಮಾಸದ ಕೊನೇ ಶುಕ್ರವಾರ ಪ್ರಯುಕ್ತ ಬನಶಂಕರಿ, ರಾಜರಾಜೇಶ್ವರಿ, ಚೌಡೇಶ್ವರಿ ಸೇರಿ ನಗರದ ದೇವಿ ದೇವಾಲಯಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬನಶಂಕರಿ ಅಮ್ಮನಿಗೆ ಹಾಗೂ ಶಾಂಕಾಂಬರಿ ದೇವರಿಗೆ ಭಕ್ತರು ನಿಂಬೆಹಣ್ಣಿನ ಹಾಗೂ ಬೆಲ್ಲದ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬೆಳಗ್ಗೆ ಬನಶಂಕರಿ ದೇವಿಗೆ ಅಭಿಷೇಕ ಮಾಡಿ, ಮಲ್ಲಿಗೆ ಹಾಗೂ ಗುಲಾಬಿ ಹೂವುಗಳಿಂದ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಆಷಾಢ ಮಾಸದ ಕೊನೇ ಶುಕ್ರವಾರ ಒಂದೇ ದಿನ 50 ಸಾವಿರಕ್ಕೂ ಅಕ ಭಕ್ತರು ಭೇಟಿ ನೀಡಿದ್ದಾರೆ. ಸಂಜೆ ಮಳೆಯನ್ನೂ ಲೆಕ್ಕಿಸದೆ ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು. ಭಕ್ತರಿಗೆ ಎಂದಿನಂತೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಾಲಯದ ಅಕಾರಿಗಳು ತಿಳಿಸಿದ್ದಾರೆ.

ದೇವಾಲಯಕ್ಕೆ ಅಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಕಬ್ಬಿಣದ ಸರಳುಗಳ ಬ್ಯಾರಿಕೇಡ್‌ಗಳನ್ನು ಹಾಕಿ ಸರತಿಯಲ್ಲಿ ಬಿಡಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಪ್ರಸಾದಕ್ಕಾಗಿ ಭಕ್ತರು ನೂಗು ನುಗ್ಗಲು ಮಾಡಿದ್ದರಿಂದ ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹಾಗೂ ದೇವಾಲಯದ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು.

ಇಷ್ಟಾರ್ಥ ಸಿದ್ಧಿ: ಆಷಾಢ ಮಾಸದಲ್ಲಿ ದೇವಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಜಯನಗರದ ನಿಮಿಷಾಂಬ ದೇವಿ, ಮಲ್ಲೇಶ್ವರದ ಸರ್ಕಲ್ ಮಾರಮ್ಮ ಹಾಗೂ ಗಂಗಮ್ಮ ದೇವಿ, ಮೆಜೆಸ್ಟಿಕ್‌ನ ಅಣ್ಣಮ್ಮ ದೇವಾಲಯ, ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಾಲಯ, ಸುಂಕದಕಟ್ಟೆಯ ಚೌಡೇಶ್ವರಿ ದೇವಾಲಯ, ಮಲ್ಲೇಶ್ವರದ ಕನ್ನಿಕಾಪರಮೇಶ್ವರಿ, ಕೆಂಪೇಗೌಡನಗರದ ಬಂಡೀಕಾಳಮ್ಮ, ಜಯನಗರದ ದುರ್ಗಾ ಪರಮೇಶ್ವರಿ ದೇವಾಲಯ ಸೇರಿ ವಿವಿಧ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ. ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net