

ಬೆಂಗಳೂರು: ತಿರುಪತಿ ತಿರುಮಲ ದೇವಾಲಯ ಮಾದರಿಯಲ್ಲಿ ನಗರದ ಶ್ರೀ ಬನಶಂಕರಿ ದೇವಾಲಯದಲ್ಲಿ ನಡೆಯುವ ಎಲ್ಲ ಸೇವೆಗಳನ್ನು ಆನ್‌ಲೈನ್ ಮೂಲಕ ನಡೆಸಲು ಸಿದ್ಧತೆ ನಡೆದಿದೆ. ಅಲಂಕಾರ, ಅರ್ಚನೆ, ದರ್ಶನ, ವಿಶೇಷ ದರ್ಶನ ಸೇರಿ ವಿಶೇಷ ದಿನಗಳಂದು ನಡೆಯುವ ಎಲ್ಲ ಸೇವೆಗಳನ್ನೂ ಇನ್ನುಮುಂದೆ ಆನ್‌ಲೈನ್ ಮೂಲಕವೇ ನಡೆಸುವಂತೆ ರಾಜ್ಯ ಮುಜರಾಯಿ ಇಲಾಖೆ ಸೂಚನೆ ನೀಡಿದೆ.
ಈ ಮೂಲಕ ಸಂಪೂರ್ಣ ಸೇವೆಗಳನ್ನು ಅನ್‌ಲೈನ್ ಮೂಲಕ ಒದಗಿಸಲಿರುವ ರಾಜ್ಯದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಶ್ರೀ ಬನಶಂಕರಿ ದೇಗುಲ ಪಾತ್ರವಾಗಲಿದೆ. ಭಕ್ತರು ದೇವಾಲಯಕ್ಕೆ ಹಣದ ರೂಪದಲ್ಲಿ ನೀಡುವ ಕಾಣಿಕೆಯನ್ನು ಆನ್‌ಲೈನ್ ಮೂಲಕ ಪಡೆಯಲಾಗುವುದು. ವಿಶೇಷ ದರ್ಶನ ಹಾಗೂ ಸೇವೆಗಳಿಗೂ ಆನ್‌ಲೈನ್ ಮೂಲಕ ಟಿಕೆಟ್ ನೀಡಲಾಗುವುದು. ಇದರಿಂದ ಟಿಕೆಟ್ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವುದು ತಪ್ಪಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಆನ್‌ಲೈನ್‌ನಲ್ಲೇ ಎಲ್ಲ ಸೇವೆಗಳು: ಮುಜರಾಯಿ ಇಲಾಖೆಯಡಿ ‘ಎ’, ‘ಬಿ’ ಮತ್ತು ‘ಸಿ’ ವರ್ಗದ 33 ಸಾವಿರಕ್ಕೂ ಅಧಿಕ ದೇವಾಲಯಗಳಿವೆ. ಇವುಗಳಲ್ಲಿ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ ಈಗಾಗಲೇ ಅಭಿಷೇಕ ಸೇರಿ ಕೆಲ ಸೇವೆಗಳಿಗೆ ಮಾತ್ರ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಣದ ರೂಪದ ಎಲ್ಲ ಸೇವೆಗಳನ್ನೂ ಆನ್‌ಲೈನ್ ಮೂಲಕವೇ ನಡೆಸಲಿದ್ದು, ಆಭರಣ, ವಸ್ತು, ಧಾನ್ಯಗಳ ರೂಪದಲ್ಲಿ ನೀಡುವ ಕಾಣಿಕೆಗಳನ್ನು ಮಾತ್ರ ದೇವಾಲಯದಲ್ಲಿ ನೀಡಿದರೆ, ಅದಕ್ಕೂ ಡಿಜಿಟಲ್ ರಸೀದಿ ನೀಡಲಾಗುವುದು. ಇದರಿಂದ ಆರ್ಥಿಕ ಸೋರಿಕೆ ತಡೆಗಟ್ಟಬಹುದು ಎನ್ನುತ್ತಾರೆ ಅಧಿಕಾರಿಗಳು.
ಟೆಂಡರ್ ಪ್ರಕ್ರಿಯೆ ಪೂರ್ಣ: ಶ್ರೀ ಬನಶಂಕರಿ ದೇಗುಲದಲ್ಲಿ ಆನ್‌ಲೈನ್ ವ್ಯವಸ್ಥೆ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಸೇವೆ ಆರಂಭವಾಗಲಿದೆ. ಒಂದು ವರ್ಷ ಕಾಲ ಟೆಂಡರ್ ಪಡೆದಿರುವ ಖಾಸಗಿ ಕಂಪನಿ ಎಲ್ಲವನ್ನೂ ನಿರ್ವಹಿಸಲಿದೆ ಎಂದು ದೇಗುಲದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಾಲಯದಲ್ಲಿ ಎಲ್ಲ ಸೇವೆಗಳು ಆನ್‌ಲೈನ್ ವ್ಯವಸ್ಥೆಗೆ ಒಳಪಡುತ್ತಿರುವುದರಿಂದ ದೇವಾಲಯವು ಪೇಪರ್ ಲೆಸ್ ಆಗುವುದರ ಜತೆಗೆ ಭಕ್ತರಿಗೆ ಸಮಯ ಉಳಿಯಲಿದೆ. ಟಿಕೆಟ್‌ಗಾಗಿ ಸರತಿಯಲ್ಲಿ ಗಂಟೆಗಟ್ಟಲೆ ನಿಲ್ಲುವ ಬದಲು ನೇರವಾಗಿ ದೇವರ ದರ್ಶನ ಪಡೆಯಬಹುದು ಎಂದು ಬನಶಂಕರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಎಚ್. ಬಸವರಾಜ್ ತಿಳಿಸಿದ್ದಾರೆ.