ಬಾಣಂತಮಾರಮ್ಮ ದೇವಿ ಅಗ್ನಿಕೊಂಡೋತ್ಸವ ಅದ್ದೂರಿ

FotoJet
Published on

ಕನಕಪುರ: ನಗರದ ಪ್ರಸಿದ್ದ ಗ್ರಾಮ ದೇವತೆ ಬಾಣಂತಮಾರಮ್ಮ ದೇವಿ ಅಗ್ನಿಕೊಂಡೋತ್ಸವ ಬುಧವಾರ ಮುಂಜಾನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು, ಸಂಜೆ ದೇವಿ ಉತ್ಸವ ಹಾಗೂ ಅಲಂಕೃತಗೊಂಡ 15ಕ್ಕೂ ಹೆಚ್ಚು ಗಾಡಿಗಳಲ್ಲಿ ಸೌದೆಗಳನ್ನು ಜಾನಪದ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಕೊಂಡಕ್ಕೆ ಸೌದೆಗಳನ್ನು ಅರ್ಪಿಸಲಾಯಿತು. ಬುಧವಾರ ಬೆಳಗ್ಗೆ ಅರುಣೋದಯಕ್ಕೂ ಮುನ್ನ ಅರ್ಕಾವತಿ ನದಿಯಿಂದ ಗಂಗೆಪೂಜೆ ನಡೆಸಿ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರಧಾನ ಅರ್ಚಕ ಕುಮಾರ್ ಕೊಂಡವನ್ನು ಹಾಯ್ದರು, ಈ ಸಂದರ್ಭದಲ್ಲಿ ನಗರ ಸೇರಿ ಸುತ್ತಮುತ್ತಲ ಸಹಸ್ರಾರು ಭಕ್ತರು ಭಕ್ತಿಭಾವದಿಂದ ದೇವಿಯ ದರ್ಶನ ಪಡೆದು ಪುನೀತರಾದರು. ಗುರುವಾರ ದೇವಿಗೆ ವಿಶೇಷ ಪೂಜೆ ಅಲಂಕಾರ, ಹಾಗೂ ಶುಕ್ರವಾರ ಸಿಡಿ ಹಾಗೂ ಜಾತ್ರೆ ನಡೆಯಲಿದೆ ಎಂದು ಸೇವಾ ಸಮಿತಿ ತಿಳಿಸಿದೆ. ಬಾಣಂತಮಾರಮ್ಮ ಸೇವಾಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ನಗರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net