

ಹೆಬ್ರಿ: ಕದಳೀಪ್ರಿಯ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸಾನ್ನಿಧ್ಯದಲ್ಲಿ ಇಷ್ಟಾರ್ಥ ಈಡೇರಿಕೆಗಾಗಿ ಬಾಳೆಹಣ್ಣಿನ ಸೇವೆ ನೆರವವೇರಿತು.
ಸಿಂಹ ಸಂಕ್ರಮಣದ ಪ್ರಯುಕ್ತ ಗುರುವಾರ ಮದುಮಕ್ಕಳ ಜಾತ್ರೆ ನಡೆಯಿತು. ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು.
ವರ್ಷದ 12 ಸಂಕ್ರಮಣದಲ್ಲಿ ಸಿಂಹ ಸಂಕ್ರಮಣ ವಿಶೇಷವಾಗಿದ್ದು ಪೆರ್ಡೂರಿನಲ್ಲಿ ಪ್ರತಿವರ್ಷ ಜಾತ್ರಾ ಸಂಭ್ರಮ ಕಂಡುಬರುತ್ತದೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ದೇವರ ದರ್ಶನ ಪಡೆಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ಮದುಮಕ್ಕಳ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. ಉಡುಪಿ, ದ.ಕ., ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಿಂದ ಸಾವಿರಾರು ಭಕ್ತರು ಕ್ಷೇತ್ರದ ದೇವರ ದರ್ಶನಕ್ಕೆ ಬರುವುದು ವಿಶೇಷ.
ಶನಿವಾರ ಭಕ್ತರಿಂದ 30 ಸಾವಿರಕ್ಕೂ ಅಧಿಕ ಸಾವಿರ ಬಾಳೆಹಣ್ಣಿನ ಸೇವೆ, 200ಕ್ಕೂ ಅಧಿಕ ಗೊನೆ ಹಣ್ಣು ಸೇವೆ ನಡೆಯಿತು. ಅರ್ಚಕ ಕೃಷ್ಣ ಅಡಿಗರ ನೇತೃತ್ವದಲ್ಲಿ 150 ಜೋಡಿಯಿಂದ ಸತ್ಯನಾರಾಯಣ ಪೂಜೆ ಸೇವೆ ನೆರವೇರಿತು. 50 ಸಾವಿರ ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ ದೇವರ ಬಲಿ ಮೂರ್ತಿ ಉತ್ಸವ ನಡೆಯಿತು. ಬೆಳಗ್ಗೆ 4ರಿಂದಲೇ ದೇವರ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. ನೂಕುನುಗ್ಗಲು ಆಗದಂತೆ ಹಿರಿಯಡಕ ಪೊಲೀಸ್ ಠಾಣೆ, ಸ್ಥಳೀಯರ ಸಹಕಾರದೊಂದಿಗೆ ಸುಲಭ ದರ್ಶನ ವ್ಯವಸ್ಥೆ ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. 6000ಕ್ಕೂ ಅಧಿಕ ಭಕ್ತರು ಭೋಜನ ಸ್ವೀಕರಿಸಿದರು.