

ಹಾಸನ: ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ನಮಾಜ್ ಹೆಸರಿನಲ್ಲಿ ರಸ್ತೆ, ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಸೌಲಭ್ಯಗಳ ದುರುಪಯೋಗಕ್ಕೆ ತಕ್ಷಣವೇ ಸರ್ಕಾರ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನೆಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶ್ರೀರಾಮಸೇನೆ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಜಾನೆಕೆರೆ ಹೇಮಂತ್ ಮಾತನಾಡಿ, ರಾಜ್ಯದ ವಿವಿಧ ನಗರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿ ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ರಸ್ತೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಶಾಲಾ ಮೈದಾನ ಮತ್ತು ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ನಮಾಜ್ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅಡ್ಡಿ ಉಂಟಾಗುತ್ತಿದೆ. ತುರ್ತು ಸೇವೆಗಳಾದ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಹೋಗುವುದಕ್ಕೂ ತೊಂದರೆ ಆಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಒತ್ತಾಯಿಸಲಾಯಿತು.
ಹಿಂದು ಹಬ್ಬಗಳು, ಜಾತ್ರೆಗಳು, ಗಣೇಶೋತ್ಸವ ಮತ್ತು ರಾಮನವಮಿ ಮೆರವಣಿಗೆಗಳಿಗೆ ಕಟ್ಟುನಿಟ್ಟಿನ ನಿಯಮ ಹೇರಲಾಗುತ್ತಿದೆ. ಆದರೆ, ರಸ್ತೆ ಮೇಲೆ ನಡೆಯುವ ನಮಾಜ್ ಕುರಿತು ಸರ್ಕಾರ ಮೌನ ವಹಿಸಿರುವುದು ಧಾರ್ಮಿಕ ವೈಷಮ್ಯಕ್ಕೆ ಉದಾಹರಣೆ ಎಂದು ಆರೋಪಿಸಿದರು.
ರಸ್ತೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯ. ಆದರೆ, ಕೆಲವಡೆ ಪೊಲೀಸರು ಅನುಮತಿ ಪಡೆಯದೆ ಟ್ರಾಫಿಕ್ ತಿರುಗಿಸುವ ಮೂಲಕ ಸಾರ್ವಜನಿಕರ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ಕಾಗಿ ರಸ್ತೆಯನ್ನು ತಡೆಹಿಡಿಯುವುದು ಕಾನೂನು ಉಲ್ಲಂಘನೆ ಎಂದು ಹೇಳಿದರು.
ಯಾವುದೇ ಧಾರ್ಮಿಕ ಪ್ರಾರ್ಥನೆಗಳು, ನಮಾಜ್ ಅಥವಾ ಸಮೂಹ ಸಭೆಗಳು ರಸ್ತೆ, ಸರ್ಕಾರಿ ಕಚೇರಿ ಆವರಣ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನಗಳಲ್ಲಿ ನಡೆಯದಂತೆ ನಿಷೇಧ ಹೇರಬೇಕು. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆಯ ‘ಸಹನೆ’ ಎಂಬ ಹೆಸರಿನಲ್ಲಿ ಸಾರ್ವಜನಿಕ ಹಕ್ಕು ಬಲಿಯಾಗಬಾರದು. ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಭವಿಷ್ಯದ ಸಾಮಾಜಿಕ ಅಶಾಂತಿಯನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಶ್ರೀರಾಮಸೇನೆ ಉಪಾಧ್ಯಕ್ಷ ಕೆ.ಕೆ. ಪುನೀತ್ ಕಾಳನಹಳ್ಳಿ, ಪ್ರಧಾನ ಕಾರ್ಯದರ್ಶಿ ಎಂ.ಜಿ. ಧರ್ಮನಾಯಕ್, ನಗರಾಧ್ಯಕ್ಷ ದರ್ಶನ ಮಹೇಶ್, ಕಾರ್ಯಾಧ್ಯಕ್ಷ ವಿನಯ್, ಅಮಿತ್ ಹಾಗೂ ಅರಕಲಗೂಡು ತಾಲೂಕು ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.