ಚನ್ನಪಟ್ಟಣದಲ್ಲಿ ಬಮುಲ್ ರಾಜಕಾರಣ ರಂಗು

ಬೆಂಗಳೂರು ಹಾಲು ಒಕ್ಕೂಟದ ಕೇಂದ್ರ ಕಚೇರಿ.
ಬೆಂಗಳೂರು ಹಾಲು ಒಕ್ಕೂಟದ ಕೇಂದ್ರ ಕಚೇರಿ.
Published on

* ನಿರ್ದೇಶಕ ಸ್ಥಾನಗಳಿಗೆ ಚುನಾವಣೆಗೆ ಹೆಚ್ಚಿದ ಪೈಪೋಟಿ

* ಮೊದಲ ಬಾರಿ ಕಾಂಗ್ರೆಸ್ - ಜೆಡಿಎಸ್ ಹೋರಾಟಕ್ಕೆ ವೇದಿಕೆ ಸಜ್ಜು

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬಮುಲ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೊಂಬೆನಾಡು ಚನ್ನಪಟ್ಟಣದಲ್ಲಿ ಕ್ಷೀರ ಕ್ಷೇತ್ರದ ರಾಜಕಾರಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ.

ಹೌದು. ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಈ ಚುನಾವಣೆಯನ್ನು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಒಕ್ಕೂಟ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಡೀ ಒಕ್ಕೂಟವನ್ನು ಕ್ಲೀನ್‌ಸ್ವೀಪ್ ಮಾಡುವುದು ಕೈ ಪಾಳಯದ ಆಶಯವಾಗಿದ್ದು, ಇಡೀ ಒಕ್ಕೂಟದಲ್ಲಿ ಜೆಡಿಎಸ್ ಪ್ರಬಲವಾಗಿರುವ ಚನ್ನಪಟ್ಟಣವನ್ನು ಟಾರ್ಗೆಟ್ ಮಾಡಲಾಗಿದೆ.

ಒಕ್ಕೂಟದ ಚನ್ನಪಟ್ಟಣ ಕ್ಷೇತ್ರದಿಂದ ಹಾಲಿ ನಿರ್ದೇಶಕ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು ಮತ್ತೊಮ್ಮೆ ಸ್ಪರ್ಧೆಗೆ ಅಣಿಯಾಗಿದ್ದಾರೆ. ಪ್ರತಿಸ್ಪರ್ಧಿಯಾಗಿ ಮಾಜಿ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಎಸ್. ಲಿಂಗೇಶ್ ಕುಮಾರ್ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹಿಂದೆ ಈ ಇಬ್ಬರು ಜೆಡಿಎಸ್‌ನಲ್ಲಿದ್ದು, ಒಂದೇ ಪಕ್ಷದಲ್ಲಿದ್ದುಕೊಂಡು ನಿರ್ದೇಶಕ ಸ್ಥಾನಕ್ಕೆ ಹೋರಾಟ ನಡೆಸುತ್ತಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಲಿಂಗೇಶ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೋರಾಟಕ್ಕೆ ಚುನಾವಣೆ ಸಾಕ್ಷಿಯಾಗುತ್ತಿದೆ.

ರಾಜಕೀಯ ಸಂಘರ್ಷಕ್ಕೆ ದಾರಿ?

ಹಾಲು ಒಕ್ಕೂಟದ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಚನ್ನಪಟ್ಟಣದ 20ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಹಕಾರ ಇಲಾಖೆ ಸಹಾಯಕ ನಿಬಂಧಕರು ನೋಟಿಸ್ ಜಾರಿಮಾಡಿರುವುದು ಸದ್ಯ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಕೆಲ ದಿನಗಳ ಹಿಂದೆ ಸಂಘಗಳಿಗೆ ಬೇಕಾಬಿಟ್ಟಿ ನೋಟಿಸ್ ನೀಡಲಾಗುತ್ತಿದೆ ಎಂದು ಆರೋಪಿಸಿ ಬಮುಲ್ ನಿರ್ದೇಶಕ ಎಚ್.ಸಿ. ಜಯಮುತ್ತು ನೇತೃತ್ವದಲ್ಲಿ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಲಾಗಿತ್ತು. ಈಗ, ಕಳೆದ ಶನಿವಾರ 8ಕ್ಕೂ ಹೆಚ್ಚು ಸಂಘಗಳಿಗೆ ಪುನಃ ನೋಟಿಸ್ ಜಾರಿಮಾಡಿದ್ದು, ತಾಲೂಕು ಜೆಡಿಎಸ್ ಪಾಳಯವನ್ನು ಕೆರಳಿಸಿದೆ.

ಜಯಮುತ್ತುಗೆ ವ್ಯೂಹ?

ಕಳೆದ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕೈ ಪಾಳಯ ಈ ಚುನಾವಣೆಯಲ್ಲೂ ಜೆಡಿಎಸ್‌ಗೆ ಮತ್ತೊಂದು ಟಕ್ಕರ್ ಕೊಡುವ ಹುರುಪಿನಲ್ಲಿದೆ. ಅಂತೆಯೇ ಒಕ್ಕೂಟದ ಚುನಾವಣೆ ಸ್ಪರ್ಧಿಸಲು ಅಣಿಯಾಗಿರುವ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ಸಿ. ಜಯಮುತ್ತುಗೆ ಸದ್ದಿಲ್ಲದೆ ವ್ಯೂಹ ರಚಿಸಲಾಗುತ್ತಿದೆ. ಈಗಾಗಲೇ ಸಹಕಾರ ಸಂಘಗಳಿಗೆ ಸಹಕಾರ ಇಲಾಖೆ ಸಹಾಯಕ ನಿಬಂಧಕರು ನೋಟಿಸ್ ಜಾರಿಮಾಡಿರುವುದು ಇದರ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ನೋಟಿಸ್ ಜಾರಿಯಾಗಿರುವ ಸಂಘಗಳ ಸಾಲಿನಲ್ಲಿ ಹಾಲಿ ಬಮುಲ್ ನಿರ್ದೇಶಕ ಎಚ್.ಸಿ. ಜಯಮುತ್ತು ಅಧ್ಯಕ್ಷರಾಗಿರುವ ಹಾರೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವೂ ಇರುವುದು ಈ ಅನುಮಾನಕ್ಕೆ ಆಸ್ಪದ ನೀಡಿದೆ.

ಹಾರೋಹಳ್ಳಿ ಡೇರಿಗೆ ನೂತನ ಕಟ್ಟಡ ನಿರ್ಮಾಣ ಮಾಡಿದ್ದು, ಈ ಕಟ್ಟಡಕ್ಕೆ ಸಂಬಂಧಿಸಿದಂತೆ ಸರಿಯಾಗಿ ಲೆಕ್ಕ ನೀಡಿಲ್ಲ ಎಂದು ಹಾಗೂ ಇನ್ನಿತರ ಲೋಪಗಳನ್ನು ಮುಂದುಮಾಡಿ ಸಂಘದ ಆಡಳಿತ ಮಂಡಳಿಗೆ ನೋಟಿಸ್ ಜಾರಿಮಾಡಲಾಗಿದೆ. ಈ ನೋಟಿಸ್‌ಗೆ ಸಮರ್ಪಕವಾಗಿ ಉತ್ತರ ನೀಡದಿದ್ದರೆ ಸಂಘದ ಆಡಳಿತ ಮಂಡಳಿಯೇ ಸೂಪರ್ ಸೀಡ್ ಆಗಲಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಮತದಾನ ಮಾಡಲು ಜಯಮುತ್ತು ಅರ್ಹತೆ ಕಳೆದುಕೊಳ್ಳುತ್ತಾರೆ. ಜಯಮುತ್ತು ಅವರನ್ನು ಕಣದಿಂದ ಹೊರಗುಳಿಸಲು ಈ ತಂತ್ರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಚುನಾವಣೆಯನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕರು ಪ್ರತಿಷ್ಠೆಯಾಗಿ ಪಡೆದಿದ್ದು, ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಅಡಗಿದೆ ಎಂಬುದು ಜೆಡಿಎಸ್ ನಾಯಕರ ಆರೋಪವಾಗಿದೆ.

ಸಹಕಾರ ಇಲಾಖೆ ಸಹಾಯಕ ನಿಬಂಧಕರು ಕಾಂಗ್ರೆಸ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಲಂಚಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಲುಕಿ ಜೈಲಿನಲ್ಲಿದ್ದ ಈ ಅಧಿಕಾರಿ ಈಗ ಮತ್ತೆ ಹಣಕ್ಕಾಗಿ ಸಹಕಾರ ಸಂಘಗಳನ್ನು ಅಸ್ಥಿರಗೊಳಿಸಲು ಮುಂದಾಗಿದ್ದಾರೆ.

ಎಚ್.ಸಿ. ಜಯಮುತ್ತು

ಬಮುಲ್ ನಿರ್ದೇಶಕ ಚನ್ನಪಟ್ಟಣ

ಯಾವ ಸಂಘಗಳಲ್ಲಿ ಲೋಪದೋಷ ಇರುತ್ತವೆಯೋ ಆ ಸಂಘಗಳಿಗೆ ನೋಟಿಸ್ ಜಾರಿ ಮಾಡುವುದು ಸಹಜ. ಇದು ಸಹಕಾರ ಇಲಾಖೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಿಯಮ. ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ನಾನು ಪ್ರತಿನಿಧಿಸುತ್ತಿರುವ ಸಂಘಕ್ಕೂ ನೋಟಿಸ್ ನೀಡಲಾಗಿದೆ. ಇದರೊಂದಿಗೆ, ನಮ್ಮ ಬೆಂಬಲಿತ ಸಂಘಗಳಿಗೂ ನೀಡಲಾಗಿದೆ. ಯಾವುದೇ ಲೋಪಗಳು ಇಲ್ಲ ಎಂದಮೇಲೆ ಆತಂಕಪಡುವ ಅಗತ್ಯವೇ ಇರುವುದ್ಲಿ. ಈ ಚುನಾವಣೆಯನ್ನು ಪಾರದರ್ಶಕವಾಗಿ ಎದುರಿಸುತ್ತೇವೆ.

ಎಸ್.ಲಿಂಗೇಶ್ ಕುಮಾರ್, ಬಮುಲ್ ಮಾಜಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net