ಹಾಲು ಖರೀದಿ ದರ ಪ್ರತಿ ಲೀಟರ್‌ಗೆ 2 ರೂ ಕಡಿತ ಮಾಡಿದ ಬಮೂಲ್

Milk
Published on

ರಾಮನಗರ

ಹೈನುಗಾರರು ಪಶು ಆಹಾರ ಸೇರಿ ಇತರ ಬೆಲೆ ಏರಿಕೆ ಸಂಕಷ್ಟದಲ್ಲಿ ಸಿಲುಕಿರುವ ನಡುವೆಯೇ ಹಾಲು ಖರೀದಿ ದರವನ್ನು ಕಡಿಮೆ ಮಾಡುವ ಮೂಲಕ ಬಮುಲ್ ಆಘಾತ ನೀಡಿದೆ.

ನ.1 ರಿಂದ ಜಾರಿಯಾಗುವಂತೆ ಪ್ರತಿ ಲೀಟರ್ ಹಾಲಿನ ಖರೀದಿ ದರವನ್ನು 2 ರೂ. ಇಳಿಕೆ ಮಾಡಿದೆ. 4 ಫ್ಯಾಟ್ 8.5 ಎಸ್‌ಎನ್‌ಎಫ್ ಇರುವ ಹಾಲಿನ ದರವನ್ನು 32.15 ರೂ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತಂತೆ ಅ.30ರಂದೇ ಆದೇಶ ಹೊರಬಿದ್ದಿದ್ದು, ಫ್ಯಾಟ್ ಅಂಶ 4ಕ್ಕಿಂತ ಕಡಿಮೆ ಇದ್ದರೆ ಅಂತಹ ಲೀಟರ್ ಹಾಲಿನ ಖರೀದಿ ದರ ಮತ್ತಷ್ಟು ಕಡಿಮೆ ಆಗಲಿದೆ.

ನಷ್ಟದಲ್ಲಿ ಬಮುಲ್

ಸಾಮಾನ್ಯವಾಗಿ ಹಾಲಿನ ಪೂರೈಕೆ ಹೆಚ್ಚಳವಾದರೆ ಹಾಲಿನ ಖರೀದಿ ದರವನ್ನು ಕಡಿಮೆ ಮಾಡುವ ಪದ್ಧತಿ ಹಿಂದಿನಿಂದಲೂ ಇದೆ. ಈಗಾಗಲೇ ಬರದಿಂದಾಗಿ ಮೇವಿನ ಬೆಲೆ ಹೆಚ್ಚಳ ಹಾಗೂ ಇತರ ರೂಪದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಮತ್ತೆ ಖರೀದಿ ದರವನ್ನು ಬಮುಲ್ ಕಡಿಮೆ ಮಾಡಿದೆ. ಇದಕ್ಕೆ ಬಮುಲ್ ಪ್ರತಿ ತಿಂಗಳು ಕನಿಷ್ಠ 15-20 ಕೋಟಿ ರೂ. ನಷ್ಟ ಅನುಭವಿಸುತ್ತಿರುವುದೇ ಕಾರಣ ಎನ್ನಲಾಗಿದೆ.

ಬಮುಲ್ ಪ್ರತಿ ಲೀಟರ್ ಹಾಲಿಗೆ 35.50 ರೂ.ವರೆಗೆ ವೆಚ್ಚ ಮಾಡಿ ಖರೀದಿ ಮಾಡುತ್ತಿದೆ. ಇದರಲ್ಲಿ 34.15 ರೂ.ಗಳನ್ನು ರೈತರಿಗೆ ನೀಡಿದರೆ, ಪ್ರತಿ ಲೀಟರ್ ಹಾಲಿಗೆ 40 ಪೈಸೆಯನ್ನು ಎಂಪಿಸಿಎಸ್‌ನ ಕಾರ್ಯದರ್ಶಿಗೆ ಹಾಗೂ 1.35 ರೂ.ಗಳನ್ನು ಸಂಘದ ನಿರ್ವಹಣಾ ವೆಚ್ಚ, ಪರಿಹಾರ ನಿಧಿ, ಬಮುಲ್ ಕಲ್ಯಾಣ ಟ್ರಸ್ಟ್‌ಗೆ ನೀಡುತ್ತಿದೆ. ಇದರ ಹೊರತಾಗಿ ಹಾಲು ಸಂಗ್ರಹ, ಪರಿಷ್ಕರಣೆ, ಮಾರಾಟ ಮಾಡುವ ವೇಳೆಗೆ ಇದರ ವೆಚ್ಚವೂ ಹೆಚ್ಚಾಗುತ್ತದೆ. ಹಾಲು ಮಾರಾಟಗಾರರಿಗೆ ಸುಮಾರು 2 ರೂ. ಕಮೀಷನ್ ನೀಡಬೇಕಿದೆ. ಇದರಿಂದಾಗಿ ಸಂಘಕ್ಕೆ ಹೊರ ಬಿದ್ದಿದೆ.

ಸಂಕಷ್ಟದಲ್ಲಿ ರೈತ

ಈಗ ಸುಮಾರು 34.15 ರೂ.ವರೆಗೆ ಪ್ರತಿ ಲೀಟರ್ ಹಾಲಿನ ದರವನ್ನು ಪಡೆಯುತ್ತಿದ್ದ ರೈತರಿಗೆ ನ.1ರಿಂದ ಏಕಾಏಕಿ 2 ರೂ. ಕಡಿಮೆ ಮಾಡಿರುವುದು ಶಾಕ್ ನೀಡಿದಂತೆ ಆಗಿದೆ. ಈಗಾಗಲೇ ಮೇವಿನ ಕೊರತೆ, ಪಶು ಆಹಾರ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೈನುಗಾರರು ಬಮುಲ್‌ನ ಈ ಆದೇಶ ಮತ್ತಷ್ಟು ಹೊಡೆತ ನೀಡಿದೆ. ಕಳೆದ ಜೂನ್‌ನಲ್ಲಿ ಖರೀದಿ ದರ ಇಳಿಕೆ ಮಾಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಬೆಲೆ ಇಳಕೆ ಮಾಡದಂತೆ ಸೂಚನೆ ನೀಡಿದ್ದರಿಂದ ಮತ್ತೆ ಎರಡು ರೂ. ಏರಿಕೆ ಮಾಡಲಾಗಿತ್ತು. ಈಗ ಕೆಲವೇ ತಿಂಗಳ ನಂತರ ಬಮುಲ್ ಖರೀದಿ ದರ ಇಳಿಕೆ ರೈತರಿಗೆ ಬರೆ ಎಳೆದಿದೆ.

ಪಶು ಆಹಾರವೂ ಹೆಚ್ಚಳ

ಈಗಾಗಲೇ ಕೆಎಂಎಫ್ ಪಶು ಆಹಾರ ಬೆಲೆ ಹೆಚ್ಚಳವಾಗಿ ಹೈನುಗಾರರ ಮೇಲೆ ಬರೆ ಎಳೆದಂತೆ ಆಗಿತ್ತು. ಹಿಂದೆ 1165 ರೂ. ಇದ್ದ 50 ಕೆಜಿ ಪಶು ಆಹಾರದ ಬೆಲೆ 1250 ರೂ. ಆಗಿದೆ. ಇತರ ಪಶು ಆಹಾರಗಳಾದ ಮೆಕ್ಕೆಜೋಳದ ನುಚ್ಚು, ಶೇಂಗಾ ಹಿಂಡಿ, ಕಡ್ಲೆ ಹೊಟ್ಟು ಮುಂತಾದವುಗಳ ಬೆಲೆಯೂ ಹೆಚ್ಚಿದೆ. ಕಳೆದ ಕೆಲ ತಿಂಗಳಿಂದೀಚೆಗೆ ಪ್ರತಿ 50 ಕೆಜಿಯ ಮೂಟೆಯ ಬೆಲೆ ಸದ್ದಿಲ್ಲದೆ ಸರಾಸರಿ 50-100 ರೂ. ಹೆಚ್ಚಳವಾಗಿದೆ. ಆದರೂ ರಾಸುಗಳಿಗೆ ಮೇವು ಕಡಿಮೆ ಮಾಡಿದರೆ ಹಾಲಿನ ಇಳುವರಿ ಕಡಿಮೆ ಆಗಲಿದೆ ಎನ್ನುವ ಕಾರಣಕ್ಕೆ ರೈತರು ನಷ್ಟದಲ್ಲಿಯೇ ಪಶು ಆಹಾರ ಖರೀದಿ ಮಾಡುತ್ತಿದ್ದಾರೆ.

ಗುಣಮಟ್ಟ ಬೆಲೆ ವಿವರ

ಗುಣಮಟ್ಟ         ದರ (ಪ್ರತಿ ಲೀಟರ್‌ಗೆ)

ಶೇ.4.0 ಫ್ಯಾಟ್ 32.15 ರೂ.

ಶೇ.3.9 ಫ್ಯಾಟ್ 31.92 ರೂ.

ಶೇ.3.8 ಫ್ಯಾಟ್ 31.69 ರೂ.

ಶೇ.3.7 ಫ್ಯಾಟ್ 31.46 ರೂ.

ಶೇ.3.6 ಫ್ಯಾಟ್ 31.23 ರೂ.

ಶೇ.3.5 ಫ್ಯಾಟ್ 31.00 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net