

*ತೆರೆ ಮರೆಯಲ್ಲಿ ಹಲವರ ಕಸರತ್ತು
* ಅಧಿಕಾರ ಹಂಚಿಕೆಗೆ ಕೈ ನಾಯಕರು ಮುಂದು
ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಂಗಳೂರು ಹಾಲು ಒಕ್ಕೂಟದ (ಬಮುಲ್) ನಿರ್ದೇಶಕ ಚುನಾವಣೆ ಮುಗಿದು 10 ದಿನ ಕಳೆದಿದ್ದು, ಈಗ ಅಧ್ಯಕ್ಷ ಸ್ಥಾನಕ್ಕಾಗಿ ತೆರೆ ಮರೆಯ ಕಸರತ್ತು ಆರಂಭಗೊಂಡಿದೆ.
ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಒಳಗೊಂಡ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಏರಲು ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಗೆಲುವು ಸಾಧಿಸಿರುವ ಕೆಲವು ನಿರ್ದೇಶಕರು ಸದ್ದಿಲ್ಲದೆ ಕಾರ್ಯಾಚರಣೆಗೆ ಇಳಿದಿದ್ದು, ಲಭ್ಯ ಮಾಹಿತಿ ಪ್ರಕಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಬೇರೆಯದೇ ಯೋಜನೆ ಸಿದ್ಧಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಮೊದಲ ಬಾರಿಗೆ ಜಿಲ್ಲೆಯ 6 ನಿರ್ದೇಶಕ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲ್ಲುವ ಮೂಲಕ ಬಮುಲ್‌ನಲ್ಲಿ ಕೈ ಪಾಳಯ ಸಂಪೂರ್ಣ ಹಿಡಿತ ಸಾಧಿಸಿದೆ. ಇದರ ಜತೆಗೆ, ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಕೆಎಂಎï ಮಾಜಿ ಅಧ್ಯಕ್ಷ ಪಿ.ನಾಗರಾಜು, ಕುದೂರಿನಿಂದ ಗೆಲುವು ಸಾಧಿಸಿರುವ ಕೆಇಬಿ ರಾಜಣ್ಣ, ಹಾರೋಹಳ್ಳಿ ಹರೀಶ್ ಕುಮಾರ್, ಈ ಬಾರಿ ಗೆಲುವು ಸಾಧಿಸಿರುವ ಲಿಂಗೇಶ್ ಕುಮಾರ್ ಮತ್ತು ಕೆಂಪೇಗೌಡ ಆಸ್ಪತ್ರೆಯ ಅಧ್ಯಕ್ಷ ಎಚ್.ಎನ್. ಅಶೋಕ್ ತಮ್ಮದೇ ಹಾದಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ.
ಒಂದೆಡೆ ಪಿ.ನಾಗರಾಜು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರೆ, ಪ್ರಬಲ ಎದುರಾಳಿ ಜೆಡಿಎಸ್ ತಾಲೂಕು ಅಧ್ಯಕ್ಷ ಆದ ಎಚ್.ಸಿ. ಜಯಮುತ್ತು ಎದುರು ಗೆಲುವು ಸಾಧಿಸಿದ ಲಿಂಗೇಶ್ ಕುಮಾರ್ ಅಧಿಕಾರಯುತವಾಗಿ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕಳೆದ 30 ವರ್ಷಗಳಿಂದ ಬಮುಲ್ ಅಧ್ಯಕ್ಷ ಸ್ಥಾನ ಚನ್ನಪಟ್ಟಣಕ್ಕೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಲಿಂಗೇಶ್ ಕುಮಾರ್‌ಗೆ ಅವಕಾಶ ಮಾಡಿಕೊಡಬೇಕೆನ್ನುವ ಬೇಡಿಕೆಯನ್ನು ಬೆಂಬಲಿಗರ ಮೂಲಕ ಕೈ ಹೈಕಮಾಂಡ್ ಎದುರು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಡಿ.ಕೆ.ಸುರೇಶ್ ಅವರ ಮನದಲ್ಲಿ ಮತ್ತೊಂದು ಯೋಜನೆ ಇದೆ ಎನ್ನಲಾಗಿದ್ದು, ಡಿ.ಕೆ.ಸು. ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಆನೇಕಲ್ ಕ್ಷೇತ್ರದಿಂದ ಬಮುಲ್ ನಿರ್ದೇಶಕರಾಗಿರುವ ರಮೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಲೆಕ್ಕಚಾರ ನಡೆದಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಚುನಾವಣೆಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಅನುಸರಿಸಲು ಕೈ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 5 ವರ್ಷಗಳ ಅವಧಿಯನ್ನು ಸಮಾನವಾಗಿ ಹಂಚಿಕೆ ಮಾಡಿ ಮೂರು ಜಿಲ್ಲೆಯ ಪ್ರಮುಖ ಆಕಾಂಕ್ಷಿಗಳಿಗೆ ಅಧಿಕಾರ ಕೊಡಿಸುವ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಮೊದಲ ಅವಧಿಗೆ ಆನೇಕಲ್ ರಮೇಶ್ ಅಧ್ಯಕ್ಷರಾದರೆ ಉಳಿದ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಪರ್ಯಾಯ ಅಧಿಕಾರಗಳನ್ನು ನೀಡುವ ಯೋಜನೆಯೂ ಇದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನ, ಬಮುಲ್ ಆಡಳಿತ ಮಂಡಳಿಯಲ್ಲಿ ಪ್ರಮುಖ ತೀರ್ಮಾನವನ್ನು ಕೈಗೊಳ್ಳುವ ಇಪಿಸಿ ಸದಸ್ಯಸ್ಥಾನ ನೀಡುವ ಮೂಲಕ ಆಕಾಂಕ್ಷಿತರನ್ನು ಸಮಾಧಾನಪಡಿಸುವ ಸೂತ್ರವನ್ನು ಕೈ ನಾಯಕರು ಹೊಂದಿದ್ದಾರೆ.
ಪ್ರತಿ ಒಕ್ಕೂಟದಿಂದ ಕೆಎಂಎïಗೆ ಓರ್ವ ನಿರ್ದೇಶಕನನ್ನು ನಾಮ ನಿರ್ದೇಶನ ಮಾಡಬೇಕು. ಈ ಬಾರಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಮಾಜಿ ಸಂಸದ ಕನಕಪುರ ಕ್ಷೇತ್ರದ ಬಮುಲ್ ನಿರ್ದೇಶಕ ಡಿ.ಕೆ.ಸುರೇಶ್ ಅವರ ನಾಮ ನಿರ್ದೇಶನ ಬಹುತೇಕ ಖಚಿತವಾಗಿದೆ. ಡಿ.ಕೆ.ಸುರೇಶ್ ಕೆಎಂಎï ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಒಕ್ಕೂಟದಿಂದ ನಾಮ ನಿರ್ದೇಶನ ಅವಶ್ಯವಾಗಿದೆ.