

ಸುಬ್ರಹ್ಮಣ್ಯ: ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿ.ಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆ ಮಾಡಿ ಮಾದರಿಯಾಗಿದೆ. ಪರಿಸರ ಸಂರಕ್ಷಣೆ, ಸ್ವಚ್ಛತೆಯ ಉದ್ದೇಶದಿಂದ ಕೆಲಸಕ್ಕೆ ಇಳಿದ ಯುವಕರಿಗೆ ಕಾಡಿನ ದಾರಿಯಲ್ಲಿ ದೊರೆತದ್ದು 2 ಲೋಡ್ ಪಿಕಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ.
ಇಕ್ಕೆಲಗಳಲ್ಲಿ ಸ್ವಚ್ಛತೆ ಮಾಡಿ ಜಾಗೃತಿ ಫಲಕ ಅಳವಡಿಸಲಾಯಿತು. ಅರಣ್ಯ ಇಲಾಖೆ ಕೂಡಾ ಸಹಯೋಗ ನೀಡಿ ಸಿಸಿಕ್ಯಾಮರಾ ಅಳವಡಿಕೆ ಮಾಡಿ ಕಸ ಎಸೆಯುವವರ ಪತ್ತೆಗೆ ವ್ಯವಸ್ಥೆ ಮಾಡಿತು. ಮುಂದೆ ಯುವಕರ ತಂಡ ಈ ಪರಿಸರದಲ್ಲಿ ನಿಗಾ ವಹಿಸಲಿದೆ. ತ್ಯಾಜ್ಯ ಎಸೆಯುವವರನ್ನು ಸಿಸಿ ಕ್ಯಾಮರಾ ಅಥವಾ ಎದುರೇ ಕಂಡರೆ ತಕ್ಷಣವೇ ಫೋಟೋ ಸಹಿತ ಇಲಾಖೆಗಳಿಗೆ ಮಾಹಿತಿ ನೀಡುವ ಬಗ್ಗೆ ಯುವಕರು ನಿರ್ಧರಿಸಿದ್ದಾರೆ.
ಕಾಡಿನಲ್ಲಿ ಕಸ ಎಸೆದು ಹೋಗುವುದು ಈಗ ಹೆಚ್ಚಾಗಿದೆ. ಬಾಟಲಿಗಳು, ಪ್ಲಾಸ್ಟಿಕ್‌ಗಳು, ಸಿಮೆಂಟ್ ತ್ಯಾಜ್ಯಗಳನ್ನು ಕಾಡಿನ ರಸ್ತೆ ಬದಿ ಎಸೆದು ಹೋಗುವುದು ಕಂಡು ಬರುತ್ತಿದೆ. ಈ ಬಗ್ಗೆ ಎಚ್ಚರಿಸಿದರೂ ಮತ್ತೆ ಕಾಡಿನಲ್ಲಿ ಕಸದ ರಾಶಿ ಬೀಳುತ್ತಿದೆ. ಕಾಡಿನ ರಸ್ತೆಯ ಬದಿಯಲ್ಲಿ ವಿಷಪೂರಿತ ಹಾವು ಬಿಡದಂತೆ ಫಲಕ ಅಳವಡಿಕೆ ಮಾಡಲಾಯಿತು.
ಮಾಜಿ ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾಪಂ ಸದಸ್ಯರಾದ ಲತಾ ಆಜಡ್ಕ, ಭರತ್ ಕಮಿಲ, ಪ್ರಮುಖರಾದ ಜಯಪ್ರಕಾಶ್ ಮೊಗ್ರ, ರಾಧಾಕೃಷ್ಣ ತುಪ್ಪದಮನೆ, ಅರಣ್ಯ ಇಲಾಖೆಯ ಸಂತೋಷ್, ಧರ್ಣಪ್ಪ, ಭರಮಪ್ಪ, ಧನಂಜಯ, ಗಣೇಶ್ ಹೆಗ್ಡೆ ಇದ್ದರು. ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಕಾರ್ಯದರ್ಶಿ ಹರ್ಷಿತ್ ಕಾಂತಿಲ, ಸದಸ್ಯರು ಇದ್ದರು.
ಕಾಡಿನ ದಾರಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ. ಅದರ ಜತೆಗೆ ವಿಷಪೂರಿತ ಹಾವುಗಳನ್ನು ರಸ್ತೆ ಬದಿಯೇ ಬಿಟ್ಟು ಹೋಗುತ್ತಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ನಡೆದಾಡುವ ಪ್ರದೇಶ ಇದು. ಹೀಗಾಗಿ ರಸ್ತೆ ಬದಿ ವಿಷಪೂರಿತ ಹಾವುಗಳನ್ನು ಬಿಡುವುದು, ಕಸ ಎಸೆಯುವುದು ಮಾಡಬಾರದು. ಮುಂದೆ ಈ ಪ್ರದೇಶದಲ್ಲಿ ನಮ್ಮ ಯುವಕರೂ ತ್ಯಾಜ್ಯ ಎಸೆಯುವುದರ ಬಗ್ಗೆ ಗಮನಿಸುತ್ತಾರೆ. - ತುಂಗನಾಥ ಕಾಯನಕೋಡಿ, ಬಾಂಧವ್ಯ ಗೆಳೆಯರ ಬಳಗ ಅಧ್ಯಕ್ಷ