ರಾಜ್ಯ ಸರ್ಕಾರದ ನಡೆ ಅಜ್ಞಾನದ ಕಡೆಗೆ

Shrinivasa
Published on

ಶ್ರೀನಿವಾಸ ರಾವ್​ ಕೆ.ಎನ್​. ಖಂಡನೆ

ಬ್ಯಾಲೆಟ್​ ಪೇಪರ್​ ಮತದಾನ ಕೈಬಿಡಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಮುಂದಿನ ಸ್ಥಳಿಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳಲ್ಲಿ ಮತದಾನಕ್ಕಾಗಿ ಇವಿಎಂ ಬದಲು ಬ್ಯಾಲೆಟ್​ ಪೇಪರ್​ಗಳನ್ನೇ ಬಳಸಲು ರಾಜ್ಯ ಕಾಂಗ್ರೆಸ್​ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ. ಅದು ವಿಜ್ಞಾನದಿಂದ ಅಜ್ಞಾನದ ಕಡೆಗೆ ಸಾಗಿದಂತಾಗಿದೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್​ ಕೆ.ಎನ್​. ಖಂಡಿಸಿದ್ದಾರೆ.

ಭಾರತವು ವಿಶ್ವದ ದಿಗ್ಗಜ ದೇಶಗಳಂತೆಯೇ ತಂತ್ರಜ್ಞಾನದ ಮೂಲಕ ಚಂದ್ರಲೋಕಕ್ಕೆ ಪಯಣ ಸೇರಿದಂತೆ ಅನೇಕ ಸಾಧನೆ ಮೂಲಕ ಗಮನ ಸೆಳೆದಿದೆ. ಈಗಾಗಲೇ ಕಳೆದ ಮೂರ್ನಾಲ್ಕು ಚುನಾವಣೆಯಲ್ಲಿ ರಾಜ್ಯದಲ್ಲಿ ಮತಪತ್ರದ ಬದಲಾಗಿ ಯಂತ್ರದ ಮೂಲಕ ಜನರೂ ಮತದಾನ ಮಾಡಿದ್ದಾರೆ. ಎವಿಎಂ ಮೂಲಕ ಮತ ಎಣಿಕೆ ಪ್ರಕ್ರಿಯೆಯೂ ಅತ್ಯಂತ ಸರಳ ಹಾಗೂ ಸಮಯದ ಉಳಿತಾಯ ಆಗುತ್ತದೆ ಎನ್ನುವುದು ಸಾಬೀತಾಗಿದೆ. ಇದು ತಿಳಿದಿದ್ದರೂ ಸಹ ತಂತ್ರಜ್ಞಾನ ಯುಗದ ಈ ಸಂದರ್ಭದಲ್ಲಿ ಮತ್ತೆ ಮತಪತ್ರದ ಮತದಾನ ಮಾಡುತ್ತೇವೆ ಎನ್ನುವುದು ಉತ್ತಮ ಬೆಳವಣಿಗೆಯಲ್ಲ. ಇದು ಅಭಿವೃದ್ಧಿ ಸೂಚಕವೂ ಅಲ್ಲ.

ಎವಿಎಂ ಮೂಲಕ ಮತದಾನದಿಂದ ಖರ್ಚು ಕಡಿಮೆಯಾಗಲಿದೆ. ಮತಪತ್ರದಿಂದಾಗಿ ಅನಗತ್ಯ ಹಾಳೆಯ ಬಳಕೆಯಾಗುವುದಲ್ಲದೆ, ಸರ್ಕಾರಕ್ಕೇ ಹೆಚ್ಚಿನ ವ್ಯಯ ಆಗಲಿದೆ. ಇತ್ತೀಚೆಗಿನ ದಿನಗಳಲ್ಲಿ ಎವಿಎಂ ಇನ್ನಷ್ಟು ಸುಧಾರಣೆಗೊಂಡಿದ್ದು, ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದು ಅಥವಾ ಶಂಕೆ ವ್ಯಕ್ತಪಡಿಸುವುದು ತರವಲ್ಲ. ಸರ್ಕಾರ ಈ ಕುರಿತು ಮತ್ತೊಮ್ಮೆ ಪರಾಮರ್ಶಿಸುವುದು ಒಳಿತು ಎಂದು ಶ್ರೀನಿವಾಸ್​ ರಾವ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net