

ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಸಿ ಎಚ್.ಡಿ. ರಾಜೇಶ್ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಶುಕ್ರವಾರ ಬೆಳ್ಳಂಬೆಳಗ್ಗೆ ನಗರದ ಪ್ರಮುಖ ಹೋಟೆಲ್ಗಳ ಮೇಲೆ ದಿಢೀರ್ ದಾಳಿ ನಡೆಸಿತು.
ವೈಶಾಲಿ ಹೋಟೆಲ್, ದಾವಣಗೆರೆ ಬೆಣ್ಣೆದೋಸೆ ಹೋಟೆಲ್, ಶ್ರೀರಂಗ ನಾನ್ವೆಜ್ ಹೋಟೆಲ್, ಪೋಲಾ ಹೋಟೆಲ್ ಹಾಗೂ ಶೇಟು ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಹೋಟೆಲ್ಗಳಲ್ಲಿ ಅಡುಗೆ ಕೋಣೆಗಳು ಸೇರಿದಂತೆ ಒಟ್ಟಾರೆ ಸ್ವಚ್ಛತೆ ಕೊರತೆ ತೀವ್ರವಾಗಿರುವುದು ಕಂಡುಬಂದಿದ್ದು, ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪೋಲಾ ಹೋಟೆಲ್ ಹಾಗೂ ಶ್ರೀರಂಗ ನಾನ್ವೆಜ್ ಹೋಟೆಲ್ನಲ್ಲಿ ಗ್ರಾಹಕರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ಕೊಳೆತ ಮಾಂಸ ಪತ್ತೆಯಾಗಿದೆ. ಇದನ್ನು ಕಂಡು ಆಕ್ರೋಶಗೊಂಡ ಅಧಿಕಾರಿಗಳು, ಮಾಲೀಕರನ್ನು ತರಾಟೆ ತೆಗೆದುಕೊಂಡರು. ಪೋಲಾ ಹೋಟೆಲ್ನಲ್ಲಿ ಹತ್ತಕ್ಕೂ ಹೆಚ್ಚು ಅನುಮಾನಾಸ್ಪದ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಮತ್ತೊಂದೆಡೆ, ಶೇಟು ಅಂಗಡಿಯಲ್ಲಿ ಮಾರಾಟಕ್ಕಾಗಿ ಇರಿಸಿದ್ದ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದವು.
ನಿಯಮ ಉಲ್ಲಂಘಿಸಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಐದು ಹೋಟೆಲ್ಗಳು ಹಾಗೂ ಅಂಗಡಿಯ ಮೇಲೆ ಕ್ರಮ ಕೈಗೊಂಡಿರುವ ಅಧಿಕಾರಿಗಳ ತಂಡ, ಪ್ರತಿ ಹೋಟೆಲ್ಗೆ ತಲಾ 25,000 ರೂ.ನಂತೆ ಒಟ್ಟು 1.25 ಲಕ್ಷ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿಯೂ ಇಂತಹ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.