

ಕಿನ್ನಿಗೋಳಿ: ಸಮೀಪದ ಬಳ್ಕುಂಜೆ ಚರ್ಚ್ 110ನೇ ವರ್ಷಾಚರಣೆ ಪ್ರಯುಕ್ತ ಚರ್ಚ್ ಮುಂಭಾಗದಲ್ಲಿ ಸಂತ ಪೌಲರ ಸ್ಮಾರಕ ನಿರ್ಮಿಸಿದ್ದು, ಇದಕ್ಕೆ ಧರ್ಮದ ಅಂತರ ತೊರೆದು ಹಿಂದು, ಮುಸ್ಲಿಂ ಕ್ರೈಸ್ತ ಸಮಾಜದವರು ಧನಸಹಾಯ ನೀಡಿ ಸೌಹಾರ್ದ ಮೆರೆದರು.
10 ಲಕ್ಷ ರೂ. ವೆಚ್ಚದ ಸ್ಮಾರಕ ನಿರ್ಮಿಸಿದ್ದು, ಇದಕ್ಕೆ ಸರ್ವಧರ್ಮದವರು ಹೊರೆಕಾಣಿಕೆ ಅರ್ಪಿಸಿದ್ದು ಸ್ಥಳೀಯ ರುಖುಮಾಯಿ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಗುತ್ತಿಗೆದಾರ ಅಶ್ವಥಾಮ ಶೆಟ್ಟಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಮುಸ್ಲಿಂ ದಫ್, ಹಿಂದು ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ವಿಶೇಷವಾಗಿತ್ತು.
110 ವರ್ಷಗಳ ಹಿಂದೆ ಬಳ್ಕುಂಜೆಯಲ್ಲಿ ಚರ್ಚ್ ಇರದ ಕಾಲದಲ್ಲಿ ಕಿಸ್ತು ಮತ್ತು ಬೊಸ್ತು ಎಂಬ ಸಹೋದರರ ಮನೆಯಲ್ಲಿ ಬಲಿ ಪೂಜೆ ಏರ್ಪಾಡು ಮಾಡಲಾಗಿತ್ತು. 1915ರಲ್ಲಿ ಬಳ್ಕುಂಜೆಯಲ್ಲಿ ಚರ್ಚ್ ನಿರ್ಮಾಣವಾಯಿತು. ತಮ್ಮ ಜಮೀನನ್ನು ಮನೆ ಸಮೇತ ಅಜಿಲ ಮನೆತನದವರಿಗೆ ಮಾರಾಟ ಮಾಡಿದರೂ ಪೌಲರ ಮೇಲಿನ ಭಕ್ತಿಯಿಂದ ಪೂಜೆ ನಡೆಯುತ್ತಿದ್ದ ಮನೆಯನ್ನು ಮಾತ್ರ ಕುಟುಂಬ ಜೋಪಾನವಾಗಿ ಕಾಪಾಡಿಕೊಂಡು ಬಂದಿದೆ.
ವಿವಿಧ ಹರಕೆಗೆ ಪ್ರಸಿದ್ಧಿ
ಮಕ್ಕಳಾಗದವರಿಗೆ ಮಕ್ಕಳು, ರೈತ ತನ್ನ ಬೆಲೆ ಹಾನಿಗೆ ಹರಕೆ ಸಂದಾಯ ಮಾಡಿದರೆ ಬೆಳೆಗೆ ಕಾಡು ಪ್ರಾಣಿಗಳ ಕಾಟ ಇಲ್ಲವಾಗುತ್ತದೆ ಎಂಬ ನಂಬಿಕೆ ಇದೆ. ಕಬ್ಬು ಬೆಳೆಗೆ ಬಳ್ಕುಂಜೆ ಹೆಸರುವಾಸಿಯಾಗಿದ್ದು ಉಭಯ ಜಿಲ್ಲೆಗಳಿಗೆ ಕಬ್ಬು ಇಲ್ಲಿಂದಲೇ ಸರಬರಾಜಾಗುತ್ತದೆ. ಹಿಂದಿನ ದಿನಗಳಲ್ಲಿ ನರಿಗಳ ಕಾಟದಿಂದ ಕಬ್ಬು ಬೆಳೆಯುವುದೇ ಅಸಾಧ್ಯವಾಗಿತ್ತು. ಈ ಸಂದರ್ಭ ಇಲ್ಲಿನ ರೈತರು ಸ್ಥಳಿಯ ಸಂತ ಪೌಲರಿಗೆ ಕಬ್ಬು ಹರಕೆ ನೀಡುತ್ತೇವೆ ಎಂದು ಹರಕೆ ಹೊತ್ತ ನಂತರ ನರಿಗಳ ಕಾಟ ಸಂಪೂರ್ಣ ನಿಂತಿದೆ. ಈಗಲೂ ಇಲ್ಲಿನ ರೈತರು ಚರ್ಚ್ಗೆ ಕಬ್ಬು ನೀಡುವ ಸಂಪ್ರದಾಯ ಮುಂದುವರಿಸಿದ್ದಾರೆ. ಸಂತಾನ ಭಾಗ್ಯ ಇಲ್ಲದ ಹಲವು ಮಂದಿ ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾರಣ ಮಕ್ಕಳಾಗಿದೆ ಎನ್ನುತ್ತಾರೆ ಸ್ಥಳೀಯರು.
ಕ್ರೈಸ್ತ ಧರ್ಮದ ಧಾರ್ಮಿಕ ಕೇಂದ್ರವಾದರೂ ಇಲ್ಲಿ ಎಲ್ಲ ಧರ್ಮದವರಿಗೂ ನಮ್ಮ ದೇವರ ಮೇಲಿನ ನಂಬಿಕೆ ಇದೆ. ಇಲ್ಲಿನ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದು ಮತ್ತು ಮುಸ್ಲಿಂ ಧರ್ಮದವರು ಭಾಗವಹಿಸುತ್ತಾರೆ. ಇದೀಗ ನಿರ್ಮಿಸಿದ ಸಂತ ಪೌಲರ ಸ್ಮಾರಕಕ್ಕೆ ಹಿಂದು ಮತ್ತು ಮುಸ್ಲಿಂ ಧರ್ಮದವರೂ ಧನ ಸಹಾಯ ನೀಡಿದ್ದಾರೆ. ಫಾ.ಪಾವ್ಲ್ ಸಿಕ್ವೇರ ಧರ್ಮಗುರು ಬಳ್ಕುಂಜೆ ಚರ್ಚ್