ಬ್ಯಾಲಹುಣ್ಸಿಯಲ್ಲಿ ಫಕೀರಸ್ವಾಮಿ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪನೆ

14-july-hdl-02
ಬ್ಯಾಲಹುಣ್ಸಿ ಗ್ರಾಮದ ಫಕೀರಸ್ವಾಮಿ ದೇವಸ್ಥಾನದಲ್ಲಿ ಪೀರಲು ದೇವರನ್ನು ಪ್ರತಿಷ್ಠಾಪಿಸಲು ಗ್ರಾಮಸ್ಥರು ಸಿದ್ಧಪಡಿಸುತ್ತಿರುವುದು.
Published on

ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲೂ ಹಿಂದುಗಳೇ ಪ್ರತಿವರ್ಷ ಮೊಹರಂ ಆಚರಿಸುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಸಂಪ್ರದಾಯದಂತೆ ಪೀರಲು ದೇವರನ್ನು ಪ್ರತಿಷ್ಠಾಪಿಸುತ್ತಿರುವುದು ವಿಶೇಷ. ಇಲ್ಲಿನ ಬಸವೇಶ್ವರ ದೇವಸ್ಥಾನ ಮುಂಭಾಗದ ಕಟ್ಟೆ ಮೇಲೆ ಪೀರಲು ದೇವರನ್ನು ಕೂಡಿಸಲಾಗುತ್ತಿತ್ತು. ಸದ್ಯ ಫಕೀರಸ್ವಾಮಿ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪಿಸುತ್ತಿದ್ದಾರೆ.

ಪಕ್ಕದ ಗ್ರಾಮದಿಂದ ಮುಜಾವರರನ್ನು ಕರೆಸಿ ಪೀರಲು ದೇವರ ಪೂಜೆ, ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಾರೆ. ಅಲಾಯಿ ಕುಣಿಯ ಕೆಂಡ ತುಳಿಯುತ್ತಾರೆ. ಮಹಿಳೆಯರು, ಮಕ್ಕಳು ಭಕ್ತಿಯಿಂದ ದೇವರಿಗೆ ಸಕ್ಕರೆ ನೈವೇದ್ಯ ಸಲ್ಲಿಸುತ್ತಾರೆ.

ಕೊನೆಯ ದಿನ ಪೀರಲು ದೇವರ ಮೂರ್ತಿಗಳನ್ನು ಮೆರವಣಿಗೆ ನಡೆಸುತ್ತಾರೆ. ಅಕ್ಕಪಕ್ಕದ ಊರುಗಳಿಂದ ಬರುವ ಕಲಾವಿದರು ಪೀರಲು ದೇವರ ಮುಂದೆ ರಿವಾಯತ್ ಮತ್ತು ಸವಾಲ್ ಪದಗಳು, ಹೆಜ್ಜೆಮೇಳ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಹಬ್ಬದ ಐತಿಹ್ಯ: ಸುಮಾರು ವರ್ಷಗಳ ಹಿಂದೆ ತುಂಗಭದ್ರಾ ನದಿಯಲ್ಲಿ ಪೀರಲು ದೇವರ ಮೂರ್ತಿಗಳು ತೇಲಿ ಬಂದು ಗ್ರಾಮದ ಸಮೀಪದ ದಡದಲ್ಲಿಯೇ ಇದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಮೊಹರಂ ದಿನ ದೇವರು ಗ್ರಾಮಕ್ಕೆ ಬಂದಿದ್ದಾರೆ. ಅದಕ್ಕಾಗಿ ಇಲ್ಲೆಯೇ ಆಚರಿಸೋಣ ಎಂದು ಅಂದಿನಿಂದ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.

ಗ್ರಾಮದ ಹಿರಿಯರು ಅನೇಕ ವರ್ಷಗಳಿಂದಲೂ ಮೊಹರಂ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಲು ಮಕರಬ್ಬಿ ಗ್ರಾಮದಿಂದ ಮುಜಾವರರನ್ನು ಕರೆಸುತ್ತೇವೆ. ಅವರ ಸಂಪ್ರದಾಯದಂತೆಯೇ ಗ್ರಾಮಸ್ಥರೆಲ್ಲರು ಹಬ್ಬವನ್ನು ಆಚರಿಸುತ್ತೇವೆ. ನನಗೆ ತಿಳಿವಳಿಕೆ ಬಂದಾಗಿನಿಂದಲೂ ಹಬ್ಬದಲ್ಲಿ ಭಾಗಿಯಾಗುತ್ತಿದ್ದೇನೆ.ಲಕ್ಷ್ಮಣಬ್ಯಾಲಹುಣ್ಸಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net