ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

Kampli Moharam2
ಜೀರಿಗನೂರು ಗ್ರಾಮದ ಮೌಲಾಲಿ ಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಪೀರಲು ದೇವರು.
Published on

ಬಳ್ಳಾಪುರ, ಜೀರಿಗನೂರು, ಕಣ್ವಿ ತಿಮ್ಮಲಾಪುರದಲ್ಲಿ ಹಿಂದುಗಳಿಂದ ಸವಾರಿ


ಬಂಗಿ ದೊಡ್ಡಮಂಜುನಾಥ

ಕಂಪ್ಲಿ: ವಾಸ್ತವದಲ್ಲಿ ಮೊಹರಂ(ಪೀರಲು ದೇವರ ಹಬ್ಬ) ಮುಸ್ಲಿಮರ ಹಬ್ಬವಾದರೂ ಹಿಂದುಗಳು ಸಹ ಭಾವೈಕ್ಯ, ಸಾಮರಸ್ಯದಿಂದ ಆಚರಿಸುತ್ತಾರೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಮುಸ್ಲಿಮರು ಇಲ್ಲದಿದ್ದರೂ ಹಿಂದುಗಳೇ ಶ್ರದ್ಧೆಭಕ್ತಿಯಿಂದ ಮೊಹರಂ ಆಚರಿಸುವ ಮೂಲಕ ಪರಧರ್ಮ ಸಹಿಷ್ಣುತೆಯೊಂದಿಗೆ ಭಕ್ತಿಭಾವ ಮೆರೆಯುತ್ತಿದ್ದಾರೆ.

ತಾಲೂಕಿನ ಬಳ್ಳಾಪುರ, ಜೀರಿಗನೂರು, ಕಣ್ವಿ ತಿಮ್ಮಲಾಪುರದಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಗ್ರಾಮಸ್ಥರೇ ಜಾತಿಭೇದವಿಲ್ಲದೆ ಪೀರಲು ದೇವರನ್ನು ಸ್ಥಾಪಿಸಿ ಹರಕೆ ತೀರಿಸುತ್ತಿದ್ದಾರೆ. ಬಳ್ಳಾಪುರ ಗ್ರಾಮದ ಮಸೀದಿಯಲ್ಲಿ ಹೊನ್ನೂರು ತಾತ, ಯಮನಪ್ಪ ತಾತ, ಸಿಟ್ಟಿನ ದೇವರು ಸೇರಿ ಐದು ಪೀರಲು ದೇವರನ್ನು ಸ್ಥಾಪಿಸಿದ್ದು, 5 ದಿನ ಸವಾರಿ ಮಾಡಲಾಗುತ್ತದೆ. ಎಮ್ಮಿಗನೂರಿನಿಂದ ಮುಸ್ಲಿಂ ಸಮುದಾಯದವರು ಬಂದು ಪೂಜೆ ಮಾಡುತ್ತಾರೆ. ಆದರೆ, ಗ್ರಾಮಸ್ಥರೇ ಪೀರಲು(ಕುದುರೆ) ದೇವರನ್ನು ಹಿಡಿಯುತ್ತಾರೆ.

ಕಣ್ವಿ ತಿಮ್ಮಲಾಪುರ ಗ್ರಾಮದ ಮೌಲಾಲಿ ತಾತನ ಗುಡಿಯಲ್ಲಿ 9 ದಿನಗಳ ಸವಾರಿಯ ಮೌಲಾಲಿ, ಹುಸೇನ್ ಬಾಷಾ, ಚಾಂದ್‌ಬಾಷಾ ಪೀರಲು ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಂಪ್ಲಿಯಿಂದ ಮುಸ್ತಫಾ ಎನ್ನುವವರು ಬಂದು ಪೀರಲು ದೇವರನ್ನು ಕೂಡಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ವಾಲ್ಮೀಕಿ ಭೀಮ, ಶರಣ, ಪರಶುರಾಮ, ಬಾಷಾ ಸೇರಿ ಹರಕೆ ಹೊತ್ತವರು ಕುದುರೆ ಹಿಡಿಯುತ್ತಾರೆ. 7 ದಿನದ ಸವಾರಿಯ ಬುಕ್ಕಸಾಗರ, ವೆಂಕಟಾಪುರಕ್ಕೆ ಕಣ್ವಿ ತಿಮ್ಮಲಾಪುರದ ಕುದುರೆಯವರು ಹೋಗಿ ಕೆಂಡ ತುಳಿದು ಬರುವ ಸಂಪ್ರದಾಯ ಇದೆ. ಬುಕ್ಕಸಾಗರ, ವೆಂಕಟಾಪುರ ಗ್ರಾಮಸ್ಥರು ಸಹ ಕಣ್ವಿ ತಿಮ್ಮಲಾಪುರಕ್ಕೆ ಬಂದು ಕೆಂಡ ತುಳಿದು ಭಕ್ತಿ ಅರ್ಪಿಸುತ್ತಾರೆ.

ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜೀರಿಗನೂರು ಗ್ರಾಮದಲ್ಲಿ 5 ದಿನಗಳ ಸವಾರಿಯ ಸಿಟ್ಟಿನ ಸ್ವಾಮಿ, ಹೊನ್ನೂರ ಸ್ವಾಮಿ, ಮೌಲಾಲಿ ತಾತ, ಹಸೇನ್-ಹುಸೇನ್ ಪೀರಲು ದೇವರನ್ನು ಕೂಡಿಸಲಾಗುತ್ತದೆ. ಜವುಕಿನಿಂದ ರಾಜಾಸಾಬ್ ಎನ್ನುವವರು ಗ್ರಾಮಕ್ಕೆ ಬಂದು ವಿಧಿವಿಧಾನ ನೆರವೇರಿಸುತ್ತಾರೆ. ಹರಕೆ ಹೊತ್ತವರು ಕುದುರೆ ಹಿಡಿಯುತ್ತಾರೆ. ಪೀರಲು ದೇವರ ಪೂಜೆ ನೆರವೇರಿಸುವ ರಾಜಾಸಾಬ್‌ನಿಗೆ ಸುಗ್ಗಿ ಸಮಯದಲ್ಲಿ ಎಲ್ಲ ರೈತರು ಭತ್ತವನ್ನು ನೀಡುತ್ತಾರೆ. ಯುಗಾದಿ ದಿನ ಕಾಣಿಕೆ ಸಹ ನೀಡಿ ಗೌರವಿಸಲಾಗುತ್ತದೆ.

ಪೀರಲು ದೇವರಿಗೆ ಕೆಂಪು ಸಕ್ರಿ, ಲಾಡಿ, ಬೆಲ್ಲದ ಹಾಲು, ಚೋಂಗಿ, ಮಾದಲಿ ನೈವೇದ್ಯ ಅರ್ಪಿಸುತ್ತಾರೆ. ರೋಗರುಜಿನಿ, ಸಂಕಷ್ಟಗಳಿಂದ ಪಾರಾಗಲು ಹರಕೆಹೊತ್ತ ಸುತ್ತಲಿನ ಗ್ರಾಮಗಳ ಭಕ್ತರು ಅಚ್ಚಳ್ಳಿಬಿಚ್ಚಳ್ಳಿ(ಹುಲಿ)ವೇಷದ ಸೇವೆ ಸಲ್ಲಿಸುತ್ತಾರೆ. ಮೊಹರಂ ಭಾವೈಕ್ಯತೆಯ ಸಾರುವ ಹಬ್ಬವನ್ನಾಗಿ ಆಚರಿಸುವಲ್ಲಿ ಹಿಂದುಗಳ ಪಾತ್ರ ಪ್ರಮುಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net