ಬಾಲಗಂಗಾಧರನಾಥ ಸ್ವಾಮೀಜಿ ಓದಿದ ಬಾನಂದೂರು ಶಾಲೆಗಿಲ್ಲ ಕಾಯಕಲ್ಪ ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಶಾಲೆ

Bgs swamyji studied GOvt school at Bananduru
Published on

ಚೇತನ್​ ಚಕ್ಕರೆ ಬಿಡದಿ

ಶಾಲೆ ಅಂದರೆ ಮಕ್ಕಳಿಗೆ ಭಯ ಇರುತ್ತದೆ. ಆದರೆ ಜೀವಭಯ ಇರಲ್ಲ. ತಪ್ಪಿದ್ದರೆ ಶಿಕ್ಷಕರು ನಾಲ್ಕು ಏಟು ಹಾಕಬಹುದು. ಅದನ್ನು ಬಿಟ್ಟರೆ ಹೆಚ್ಚಿನದೇನೂ ಆಗುವುದಿಲ್ಲ. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೂ ಜೀವಭಯ ಶುರುವಾಗಿದೆ. ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಕೆ ಆಗುತ್ತಿದೆ.

ಹೌದು ಬಾನಂದೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ ಹೇಳ ತೀರದಾಗಿದೆ. ಇಡೀ ಶಾಲಾ ಕಟ್ಟಡವೇ ಅಪಾಯದಲ್ಲಿದೆ. ಶಾಲೆ ಕಟ್ಟಡದ ಮೇಲ್ಚಾವಣಿಯಲ್ಲಿನ ಗೋಡೆ ಹಾಗೂ ಹೆಂಚುಗಳು ಬೀಳುತ್ತಿವೆ. ಯಾವಾಗ ಶಾಲೆ ಕುಸಿದು ಬೀಳುತ್ತದೆಯೋ ಎಂಬ ಭಯ ಆವರಿಸಿದೆ.

ಹೀಗೆ ಶಾಲೆ ಹಾಳಾದ ಬಗ್ಗೆ ಸಂಬಂಧಪಟ್ಟವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಚುನಾವಣೆಗಳು ಬಂದಾಗ ಮತಗಟ್ಟೆಗಳನ್ನು ಮಾಡಲು ಶಾಲೆಗಳು ನೆನಪಾಗುತ್ತವೆ. ಆದರೆ ಶಾಲೆ ಅಭಿವೃದ್ಧಿಗೆ ಯಾರೂ ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

student of Bananduru school sit on Bench

ಕಾಡುತ್ತಿದೆ ಜೀವ ಭಯ

ಶಾಲೆಯ ಮೇಲ್ಚಾವಣಿ ಶಿಥಿಲಗೊಂಡಿದ್ದರ ಪರಿಣಾಮ ಶಾಲೆಯ ಕೆಲಸವೇ ಬೇಡ ಎಂದು ಕೆಲ ಸ್ಥಿತಿವಂತ ಪಾಲಕರು ಮಕ್ಕಳನ್ನು ದೂರದ ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಆದರೆ ಬಡವರಿಗೆ ಇದು ಸಾಧ್ಯವಾಗಿಲ್ಲ. ಇದೀಗ ಶಾಲೆಯಲ್ಲಿ 25 ಮಕ್ಕಳಿದ್ದಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುವುದು ಈ ಮಕ್ಕಳ ಸ್ಥಿತಿಯಾದರೆ, ಅತ್ತ ಶಿಕ್ಷಕರ ಸ್ಥಿತಿಯೇನೂ ಭಿನ್ನವಾಗಿಲ್ಲ.

ಶ್ರೀಗಳು ಪಾಠ ಕೇಳಿದ ಶಾಲೆ

1966ರಲ್ಲಿ ಈ ಸರ್ಕಾರಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಬಿಜಿಎಸ್​ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರು ಕೂಡ ಇದೆ ಗ್ರಾಮವಾಗಿದ್ದು, ಶ್ರೀಗಳು ಸಹ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಮುಗಿಸಿದ್ದಾರೆ. ಇವರಲ್ಲದೆ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತಿತರ ಗಣ್ಯರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎನ್ನುವುದು ವಿಶೇಷ. ಆದರೆ, ಇಂತಹ ಶಾಲೆಗೆ ದುಸ್ಥಿತಿ ಬಂದಿರುವುದು ವಿಪರ್ಯಾಸ.

ಹಳೆಯ ವಿದ್ಯಾರ್ಥಿಗಳಿಂದ ಶ್ಲಾನೀಯ ಕಾರ್ಯ

ಬಾನಂದೂರು ಗ್ರಾಮದ ಸರ್ಕಾರಿ ಶಾಲೆ ಹೆಸರಿಗಷ್ಟೆ ಸರ್ಕಾರಿ ಶಾಲೆ ಆಗಿತ್ತು. ಕಟ್ಟಡದ ನಿರ್ಮಾಣ ಮಾತ್ರ ಸರ್ಕಾರದಿಂದ ಮಾಡಲಾಗಿತ್ತು. ಅದರೆ ಕಟ್ಟಡದ ಜಾಗ ಖಾಸಗಿಯವರ ಹೆಸರಿನಲ್ಲಿತ್ತು. ಈ ವಿಚಾರವಾಗಿ ಗ್ರಾಮದ ಜಗದೀಶ್​ ಗೌಡ ಮತ್ತು ಅವರ ಸ್ನೇಹಿತರು ಸೇರಿ ಶಾಲೆ ಇದ್ದ 7 ಗುಂಟೆ ಜಮೀನನ್ನು ಖಾಸಗಿಯವರಿಗೆ ಹಣ ನೀಡಿ ರಾಮನಗರ ತಾಲೂಕಿನ ೇತ್ರ ಶಿಕ್ಷಣಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.

ನಮ್ಮೂರ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಹಾಗಾಗಿ ಪಾಲಕರು ಮಕ್ಕಳನ್ನು ಈ ಶಾಲೆಗೆ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮವನ್ನು ಪಾರಂಪರಿಕ ತಾಣ ಮಾಡುತ್ತೇವೆ ಎಂದು ಕಳೆದ ಬಿಜೆಪಿ ಸರ್ಕಾರದಲ್ಲಿ 25 ಕೋಟಿ ಹಣ ನೀಡಿ ಯೋಜನೆ ಘೋಷಣೆ ಮಾಡಲಾಗಿತ್ತು. ಆದರೆ ಯಾವ ಕೆಲಸಗಳೂ ನಡೆಯುತ್ತಿಲ್ಲ. ಈಗಾಗಲೇ ಗ್ರಾಮದ ಹಳೆಯ ವಿದ್ಯಾರ್ಥಿಗಳ ಹಣದಿಂದ ಜಮೀನು ಖರೀದಿ ಮಾಡಲಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ದೇಣಿಗೆ ಎತ್ತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಜಗದೀಶ್​, ಗ್ರಾಮದ ಯುವ ಮುಖಂಡ
ನಮ್ಮ ಗ್ರಾಮ ದೇಶ ವಿದೇಶದಲ್ಲಿ ಹೆಸರು ಮಾಡಿದೆ. ಇದಕ್ಕೆ ಕಾರಣ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳು. ಇಂತಹ ಮಹನೀಯರು ವಿದ್ಯಾಭ್ಯಾಸ ಮಾಡಿದ ಶಾಲೆ ಇಂದು ಯಾರಿಗೂ ಬೇಡವಾಗಿದೆ. ಸರ್ಕಾರವಾಗಲಿ, ಸ್ಥಳಿಯ ಜನಪ್ರತಿನಿಧಿಗಳಾಗಲಿ ಈ ಶಾಲೆ ಉಳಿವಿನತ್ತ ಮುಖ ಮಾಡಿಲ್ಲ. ಹಾಗಾಗಿ ಶಾಲೆ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ.  ಪಾಪಣ್ಣ, ಗ್ರಾಮಸ್ಥ ಹಾಗೂ ಕರವೇ ಜಿಲ್ಲಾಧ್ಯಕ್ಷ

ಬಾನಂದೂರು ಗ್ರಾಮದ ಸರ್ಕಾರಿ ಶಾಲಾ ಕಟ್ಟಡದ ವಿಚಾರವಾಗಿ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಸೂಚಿಸಿದ್ದರು. ಅದರಂತೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶಾಲಾ ಕಟ್ಟಡ, ಕಾಂಪೌಂಡ್​ ದುಸ್ಥಿತಿಯಲ್ಲಿದೆ. ಈ ಬಗ್ಗೆ ಡಿಡಿಪಿಐ ಅವರಿಗೆ ವರದಿ ನೀಡಲಾಗುತ್ತದೆ.

ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net