ತಮ್ಮಣ್ಣ ಬೀಗಾರರಿಗೆ ಬಾಲ ವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ

IMG-20230325-WA0017
Published on

 ಸಿದ್ದಾಪುರ: ಧಾರವಾಡದ ಬಾಲ ವಿಕಾಸ ಅಕಾಡೆಮಿ ನೀಡುವ 2020- 21ನೇ ಸಾಲಿನ  ಗೌರವ ಪ್ರಶಸ್ತಿಯು ತಮ್ಮಣ್ಣ ಬೀಗಾರ ಅ‌ವರಿಗೆ ಲಭಿಸಿದೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಕೊಡುವ ಈ ಪ್ರಶಸ್ತಿಯು 25000 ನಗದು ಹಾಗೂ ಪುರಸ್ಕಾರಗಳನ್ನು ಒಳಗೊಂಡಿದೆ. ಮಾರ್ಚ್‌ 27ರಂದು ಧಾರವಾಡದ ಬಾಲವಿಕಾಸ ಅಕಾಡೆಮಿಯಲ್ಲಿ ಆಯೋಜನೆಯಾಗಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೀಗಾರರಿಗೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ. ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕವನ ಸಂಕಲನ, ಕಥಾಸಂಕಲನ, ಕಾದಂಬರಿ, ಲಲಿತ ಪ್ರಬಂಧ ಹೀಗೆ ಸುಮಾರು ಮೂವತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಮೂವತ್ತೇಳು ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು ಇವರಿಗೆ ಶಿಕ್ಷಕರಿಗೆ ನೀಡುವ ರಾಜ್ಯ ಮತ್ತು ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಬೀಗಾರರು ತಮ್ಮ ಸಾಹಿತ್ಯದಲ್ಲಿ ಮಲೆನಾಡಿನ ಹಸಿರನ್ನು ಇಲ್ಲಿನ ಜೀವನ ವಿಧಾನವನ್ನು ಮಕ್ಕಳ  ಕಷ್ಟ ಸುಖಗಳನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಗಣಿಗಾರಿಕೆಯಿಂದಾಗಿ ಪರಿಸರದಲ್ಲಿ ಉಂಟಾಗುವ ಅಪಾಯದ ಕುರಿತು ಬೆಳಕು ಚೆಲ್ಲುವ ಇವರ ಮಕ್ಕಳ ಕಾದಂಬರಿ 'ಬಾವಲಿ ಗುಹೆ'. ಈ ಕಾದಂಬರಿಗೆ ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡುವ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ. ಬೀಗಾರರ ಕಲಾ ಕೃತಿ, ಸಂದರ್ಶನಗಳು ದೂರದರ್ಶನ ಆಕಾಶವಾಣಿಗಳಲ್ಲಿ ಪ್ರಸಾರ ಆಗಿದ್ದು ವ್ಯಂಗ್ಯ ಚಿತ್ರಕಾರರಾಗಿಯೂ ಪರಿಚಿತರು. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ ವಸುದೇವ ಭೂಪಾಲಂದತ್ತಿ ಪ್ರಶಸ್ತಿ ಪುಸ್ತಕ ಸೊಗಸು ಬಹುಮಾನ ಮಕ್ಕಳ ಚಂದ್ರ ಪ್ರಶಸ್ತಿ ಮುಂತಾದವು ಇವರ ಸಾಹಿತ್ಯ ಕೃತಿಗಳಿಗೆ ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net