

ಉಪ್ಪಿನಂಗಡಿ: ಅಕ್ರಮ ಸಕ್ರಮ, 94ಸಿ ಹಕ್ಕು ಪತ್ರ ಪಡೆಯಲು ಬಡವರು ಸಲ್ಲಿಸಿದ್ದ ಅರ್ಜಿಗಳು ತಾಲೂಕು ಕಚೇರಿಯಲ್ಲಿ ಧೂಳು ಹಿಡಿದು ರಾಶಿ ಬಿದ್ದಿದ್ದವು. ಅವುಗಳನ್ನು ವಿಲೇವಾರಿ ಮಾಡಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ಸು ಸಾಧಿಸಿದ ತೃಪ್ತಿ ನನಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬಜತ್ತೂರು ಗ್ರಾ.ಪಂ. ಸಭಾಂಗಣದಲ್ಲಿ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.
ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಇದನ್ನು ಕ್ಷೇತ್ರದ ಜನತೆಗೋಸ್ಕರ ತಂದಿದ್ದೇನೆ. ಜನ ಅದನ್ನು ಸ್ವೀಕರಿಸಿದ್ದಾರೆ. ಮುಂದೆ ಪುತ್ತೂರಿನ ಅಭಿವೃದ್ಧಿಗೆ ಇದು ಕಾರಣವಾಗಲಿದೆ ಎಂದರು.
ಕೊಲದಲ್ಲಿರುವ ಜಾನುವಾರು ಕೇಂದ್ರವನ್ನು ಈ ಹಿಂದಿನ ಶಾಸಕರು ಕಡೆಗಣಿಸಿದ್ದಾರೆ. ಕಳೆದ ಅವಧಿಯ ಬಿಜೆಪಿ ಸರ್ಕಾರ ಕೊಲ ಪಶುಸಂಗೋಪನಾ ಕೇಂದ್ರಕ್ಕೆ ನಯಾ ಪೈಸೆ ನೀಡಿಲ್ಲ. ಸಿದ್ದರಾಮಯ್ಯ ಸಿ.ಎಂ. ಆಗಿದ್ದಾಗ ಅನುದಾನ ಇಟ್ಟಿದ್ದರು. ಆ ಬಳಿಕ ಬಂದ ಬಿಜೆಪಿ ಸರ್ಕಾರ ಇದನ್ನು ಕಡೆಗಣಿಸಿತ್ತು. ಇದೀಗ 19 ಕೋಟಿ ರೂ. ಅನುದಾನ ತಂದು ಅದನ್ನು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.
ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಸದಸ್ಯರಾದ ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ, ತಹಸೀಲ್ದಾರ್ ಪುರಂದರ್ ಹೆಗ್ಡೆ, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಉಪಸ್ಥಿತರಿದ್ದರು.
11 ಗ್ರಾಮಗಳ ಹಕ್ಕುಪತ್ರ ವಿತರಣೆ
ಪಡ್ನೂರು, ಬನ್ನೂರು, ಕಬಕ, ಕೊಡಿಪ್ಪಾಡಿ, ಚಿಕ್ಕಮುಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ಹಿರೆಬಂಡಾಡಿ ಗ್ರಾಮಗಳ ಒಟ್ಟು 127 94ಸಿ ಹಕ್ಕುಪತ್ರ ವಿತರಿಸಲಾಗಿದೆ. 60 ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗಿದೆ.