ಭೈರಪ್ಪ ನಿಧನಕ್ಕೆ ಕಂಬನಿ ಮಿಡಿದ ಸಾಹಿತ್ಯ ಲೋಕ

Raghu_25_SL Bhyrappa_Body_@_Ravindra_Kalakshetra (12)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡ ನಾಡಿನ ಸಾಪ್ರಜ್ಞೆ ಹಿರಿಯ ಸಾಹಿತಿ ಪ್ರೊ.ಎಸ್​.ಎಲ್​.ಭೈರಪ್ಪ ಅವರು ಸೆ.24ರಂದು ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಗುರುವಾರ ಕನ್ನಡ ಮತ್ತು ಸಂಸತಿ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತದ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಡೆಯಿತು.

ಪದ್ಮಭೂಷಣ, ಸರಸ್ವತಿ ಸಮ್ಮಾನ್​ ಪುರಸತರಾದ ಎಸ್​.ಎಲ್​.ಭೈರಪ್ಪ (94) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೊತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ನಿಧನರಾದರು. ಅಲ್ಲಿಂದ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 8.30ಕ್ಕೆ ವಿಶೇಷ ವಾಹನದಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ರವಾನಿಸಲಾಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ ಏಳು ಗಂಟೆಯಿಂದಲೇ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಲಾಗಿತ್ತು. 9 ಗಂಟೆ ಅಷ್ಟರಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಹಿರಿಯ ಸಾಹಿತಿಗಳು, ರಾಜಕೀಯ ನಾಯಕರು, ಸಿನಿಮಾ ಕ್ಷೇತ್ರದವರು, ಬಂಧು&ಮಿತ್ರರು ಹಾಗೂ ಅವರ ಅಪಾರ ಅಭಿಮಾನಿ ಬಳಗ ಮೃತರ ಅಂತಿಮ ದರ್ಶನ ಪಡೆದರು. ಸಾವಿರಾರು ಮಂದಿ ಸರತಿ ಸಾಲಿನಲ್ಲಿ ಬಂದು ಎಸ್​.ಎಲ್​.ಭೈರಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಗಣ್ಯರು ಭೈರಪ್ಪ ಅವರ ಸಾಹಿತ್ಯ ಕ್ಷೇತ್ರದ ಸಾಧನೆ, ಅವರಿಗೆ ಸಂದ ಗೌರವ, ಅವರ ಪುಸ್ತಕಗಳು ಹಾಗೂ ಮುಖ್ಯವಾಗಿ ಅವರ ವಿಶಿಷ್ಟ ವ್ಯಕ್ತಿತ್ವದ ಬಗ್ಗೆ ಸಂತಾಪ ಸೂಚನೆ ವೇಳೆ ನೆನಪು ಮಾಡಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಶಿವರಾಜ ತಂಗಡಗಿ, ಎಚ್​.ಕೆ.ಪಾಟೀಲ, ಮಧು ಬಂಗಾರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದರಾದ ತೇಜಸ್ವಿ ಸೂರ್ಯ, ಗೋವಿಂದ ಕಾರಜೋಳ, ಪಿ.ಸಿ.ಮೋಹನ್​, ಮಾಜಿ ಸಂಸದ ಪ್ರತಾಪ್​ ಸಿಂಹ ಸೇರಿ ಮತ್ತಿತರರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಸುಮಾರು 1.30 ಗಂಟೆಗೆ ಪಾರ್ಥಿವ ಶರೀರವನ್ನು ಮೈಸೂರಿಗೆ ರವಾನೆ ಮಾಡಲಾಯಿತು.

ಹಿರಿಯ ಸಾಹಿತಿ ಎಸ್​.ಎಲ್​.ಭೈರಪ್ಪನವರ ಕಾದಂಬರಿಗಳು ಸತ್ಯದ ಅನ್ವೇಷಣೆಯನ್ನು ಹೊಂದಿವೆ. ರಾಷ್ಟ್ರವಾದ ಚಿಂತನೆಗಳನ್ನು ಅವರು ಪ್ರಖರವಾಗಿ ಮಂಡಿಸಿದರು. ಅಪ್ರತಿಮ ಸಾಹಿತಿಯ ಅಗಲುವಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆ ತಡೆಯುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಎಸ್​.ಎಲ್​.ಭೈರಪ್ಪ ಸ್ಮಾರಕವನ್ನು ಮಾಡಬೇಕೆಂದು ಮುಖ್ಯಮಂತ್ರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ. > ಬಿ.ವೈ.-ವಿಜಯೇಂದ್ರ, ಬಿಜೆಪಿ ರಾಜ್ಯ ಟಕದ ಅಧ್ಯಕ್ಷ ಭೈರಪ್ಪ ಅವರು ಒಬ್ಬ ರಾಷ್ಟ್ರೀಯವಾದಿ ಚಿಂತನೆಯುಳ್ಳ ಪ್ರಖರ ಲೇಖಕರಾಗಿದ್ದರು. ಪದ್ಮಶ್ರೀ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ನಾನಾ ಪ್ರಶಸ್ತಿಗಳು ಬಂದಿದೆ ಎಂದು ಅವರು ಎಂದಿಗೂ ಬೀಗಲಿಲ್ಲ. ಒಬ್ಬ ಜನಸಾಮಾನ್ಯರಂತೆ ಜೀವನ ಮಾಡುತ್ತಿದ್ದರು. ಒಬ್ಬ ಚಿಂತಕರನ್ನು ನಾವು ಕಳೆದುಕೊಂಡಿದ್ದೇವೆ. ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. > -ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ ಎಸ್​.ಎಲ್​.ಬೈರಪ್ಪ ಅವರು ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದರು. ಅದ್ವೀತಿಯ ಸಾಹಿತಿಗಳು. ಭೈರಪ್ಪನವರ ಅಗಲುವಿಕೆಯಿಂದ ಕನ್ನಡ ನಾಡು ಅನಾಥವಾಗಿದೆ. ಅವರು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳು ಹಲವು. ದೇಶ&ವಿದೇಶದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ತಮ್ಮ ಸಾಹಿತ್ಯದ ಮೂಲಕ ಭಾರತೀಯ ಸಂಸತಿಯನ್ನು ಪ್ರತಿಪಾದಿಸಿದರು. ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನೇ ತೋರಿದರು. > -ಬಿ.ಎಸ್​.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಶ್ರೇಷ್ಠ ಸಾಹಿತಿ ಎಸ್​.ಎಲ್​.ಭೈರಪ್ಪ ಅವರು ಜ್ಞಾನ ಭಂಡಾರದ ದೃಷ್ಟಿಯಲ್ಲಿ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಅಗಲುವಿಕೆಯಿಂದ ಸಾಹಿತ್ಯ, ವೈಚಾರಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಆರ್​ಎಸ್​ಎಸ್​ ವತಿಯಿಂದ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇವೆ. ಅವರ ಬದುಕು ಬರಹ ಹಾಗೂ ಚಿಂತನೆಗಳು ದೀರ್ಕಾಲ ಸಾಹಿತ್ಯ, ವೈಚಾರಿಕ ಲೋಕ ಹಾಗೂ ಸಾಮಾಜಿಕ ಲೋಕಕ್ಕೂ ಮಾರ್ಗದರ್ಶಕ. ಅವರ ಆತ್ಮಕ್ಕೆ ಸದ್ಗತಿಯನ್ನು ದೇವರು ಒದಗಿಸಲಿ. > ಸಿ.ಆರ್​.ಮುಕುಂದ, ರಾಷ್ಟ್ರೀಯ ಸ್ವಯಂಸೇವಕ ಸಂದ ಸಹ ಸರಕಾರ್ಯವಾಹ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net