9ರಂದು ಬಹುಜನ ಸಂಕಲ್ಪ ದಿನಾಚರಣೆ

6blrp1-gangadar bahujan
ಬಿಎಸ್‌ಪಿ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್
Published on

ಬೇಲೂರು: ತಳ ಮತ್ತು ಹಿಂದುಳಿದ ಸಮುದಾಯಗಳನ್ನು ಗುರುತಿಸಿ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಗೆ ತಂದವರೇ ಬಿಎಸ್‌ಪಿ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಷಿರಾಮ್. ಅವರ ಹೆಸರಿನಲ್ಲಿ ದೇಶಾದ್ಯಂತ ಬಹುಜನ ಸಂಕಲ್ಪ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಹೇಳಿದರು.

ಬಿಎಸ್‌ಪಿ ಸಂಸ್ಥಾಪಕ ಕಾನ್ಷಿರಾಮ್ ಹೆಸರಲ್ಲಿ ಈಗಾಗಲೇ ಭಾರತ ದೇಶದಾದ್ಯಂತ ಬಹುಜನರ ಸಂಕಲ್ಪ ದಿನ ಆಚರಿಸಲಾಗುತ್ತಿದೆ. ಅದೇ ರೀತಿ ಕರ್ನಾಟಕ ನಾಲ್ಕು ವಿಭಾಗಗಳಲ್ಲೂ ಸಮಾವೇಶಗಳನ್ನು ಆಯೋಜಿಸಿದ್ದು, ಅ.9ರಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಮೈಸೂರು ವಿಭಾಗ ಮಟ್ಟದ ಬಹುಜನ ಸಂಕಲ್ಪ ದಿನವನ್ನು ಆಚರಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾನ್ಷಿರಾಮ್ ಅವರು ದೇಶದ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಲ್ಲಿ ರಾಜಕೀಯ ಜಾಗೃತಿ ಮೂಡಿಸಿ ಎಲ್ಲ ವರ್ಗದವರನ್ನು ರಾಜಕೀಯ ಕ್ಷೇತ್ರಕ್ಕೆ ತಂದರು. ಗೌತಮ ಬುದ್ಧರು ಹೇಗೆ ಜನ ಕಲ್ಯಾಣಕ್ಕಾಗಿ ಕಾಡಿಗೆ ಹೋದರೋ ಹಾಗೆ ಕಾನ್ಷಿರಾಮ್ ಅವರು ವಿವಾಹವಾಗದೆ, ಆಸ್ತಿ ಹೊಂದದೆ ಬಹುಜನ ಸಮಾಜವನ್ನು ಕಟ್ಟಲು ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ರಾಜಕೀಯ ಪಕ್ಷವನ್ನು ಕಟ್ಟಿ ಮೂರನೇ ರಾಷ್ಟ್ರೀಯ ಪಕ್ಷವನ್ನಾಗಿ ಮಾಡಿದ್ದಲ್ಲದೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಬಹುಜನ ಸಮಾಜ ಪಕ್ಷವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಕಾನ್ಷಿರಾಮ್ ಹೆಸರಲ್ಲಿ ಬಹುಜನ ಸಂಕಲ್ಪ ದಿನವನ್ನಾಗಿ ಆಚರಿಸುತ್ತಿದ್ದು, ಇದು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಈ ಹಿನ್ನೆಲೆಯಲ್ಲಿ ಇದೇ 9ರಂದು ಜಿಲ್ಲೆಯ ಅರಕಲಗೂಡಿನಲ್ಲಿ ವಿಭಾಗೀಯ ಮಟ್ಟದ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶಕ್ಕೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ಕೆಸಗೋಡು ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ, ತಾಲೂಕು ಸಂಯೋಜಕ ಉಮೇಶ್, ಪ್ರ.ಕಾರ್ಯದರ್ಶಿ ಮಂಜುನಾಥ, ಹೋಬಳಿ ಅಧ್ಯಕ್ಷ ಹೊನ್ನಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net