ಕಲ್ಯಾಣ, ಪುನರ್ವಸತಿ ಕಾರ್ಯಕ್ರಮ ರೂಪಿಸಲಿ

Published on

ದೇವದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ವಿಮುಕ್ತ ದೇವದಾಸಿಯರ ವಿವಿಧ ಬೇಡಿಕೆ ಈಡೇರಿಸಿದ್ದು ಸ್ವಾಗತಾರ್ಹ. ಇದರ ಜತೆಗೆ ದೇವದಾಸಿ ಪದ್ಧತಿ ನಿರ್ಮೂಲನೆ ಹಾಗೂ ಪುನರ್ವಸತಿ ಕುರಿತು ಸಿದ್ದಪಡಿಸಿರುವ ಸಮಗ್ರ ಕರಡು ಬಿಲ್ ಸ್ವೀಕರಿಸಬೇಕು ಎಂದು ಬಹುಜನ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಂ.ಆರ್.ಭೇರಿ ಒತ್ತಾಯಿಸಿದರು.

ಸಮಗ್ರ ಕರಡು ಬಿಲ್ ಸ್ವೀಕರಿಸಿ

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ವಿಮುಕ್ತ ದೇವದಾಸಿ ಕುಟುಂಬಗಳ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್, ಪಿಂಚಣಿ ಹೆಚ್ಚಳ ಹಾಗೂ ವಸತಿ ರಹಿತ ಕುಟುಂಬಗಳಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಹಣಕಾಸಿನ ನೆರವು ನೀಡಲು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಶ್ಲಾಘನೀಯ.

ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯಗೆ ಭೇಟಿಮಾಡಿ ಪಿಂಚಣಿ ಹೆಚ್ಚಳ, ವಿಶೇಷ ಪ್ಯಾಕೇಜ್ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಬೇಡಿಕೆ ಈಡೇರಿಸುವ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ವಿಮುಕ್ತ ದೇವದಾಸಿ ಕುಟುಂಬಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತು ನಿಖರ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಸೂಕ್ತ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಕ್ರಮ ರೂಪಿಸಬೇಕು.

ಮುಂದಿನ ದಿನಗಳಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ ಹಾಗೂ ಪುನರ್ವಸತಿ ಕುರಿತು ಸಿದ್ದಪಡಿಸಿರುವ ಸಮಗ್ರ ಕರಡು ಬಿಲ್ ಜಾರಿಗೆ ತರಲು ಸರ್ಕಾರ ಮುಂದಾಗಬೇಕು. ಈ ಬಗ್ಗೆ ವೇದಿಕೆಯಿಂದ ಗಮನ ಸೆಳೆಯಲಾಗುವುದು ಎಂದರು. ಮುಖಂಡರಾದ ಹನುಮಂತಪ್ಪ ಮನ್ನಾಪುರ, ರವಿಚಂದರ ಮೇತ್ರಿ ಗುಂಟ್ರಾಳ, ಸಂಗಪ್ಪ ಮಸಿಹಾಳ, ಮೌನೇಶ ಕಕ್ಕಲದೊಡ್ಡಿ, ಮಾನಪ್ಪ ಮೇಸ್ತ್ರಿ, ಪಡಿಯಮ್ಮ, ಮರಿಯವ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net