

ಬೇಲೂರು: ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಪಟ್ಟಣ ಸಮೀಪದ (ವಿಷ್ಣು ಸಮುದ್ರ) ಬಿಷ್ಟಮ್ಮನ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ನೇತೃತ್ವದಲ್ಲಿ ಸೋಮವಾರ ಬಿಟ್ರುವಳ್ಳಿ ಗ್ರಾಮಸ್ಥರು ಬಿಷ್ಟಮ್ಮನ ಗದ್ದಿಗೆಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿ, ಬಿಷ್ಟಮ್ಮನ ಕೆರೆಗೆ ತನ್ನದೆ ಆದ ಇತಿಹಾಸವಿದೆ. ಇಲ್ಲಿನ ಕೆರೆ ದಡದಲ್ಲಿ ಬಿಷ್ಟಮ್ಮನ ಗದ್ದಿಗೆ ಇದ್ದು ಪ್ರತಿವರ್ಷ ಜಾತ್ರಾ ಮಹೋತ್ಸವ ನಡೆಯಲಿದೆ. ಕೆರೆ ತುಂಬಿದರೆ ಈ ಭಾಗದ ರೈತರಿಗೆ ರೈತರಿಗೆ ಅನುಕೂಲವಾಗಲಿದೆ. ಇಲ್ಲಿಂದ ಕೋಡಿ ಮೂಲಕ ಹೊರ ಹೋಗುವ ನೀರು ಪೋಲಾಗದಂತೆ ಅಧಿಕಾರಿಗಳು ಗಮನ ಹರಿಸಿದರೆ ಬಯಲು ಪ್ರದೇಶವಾದ ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಕೆರೆಗಳಿಗೂ ನೀರು ತುಂಬಿಸಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಗ್ರಾಮಸ್ಥರಾದ ಅಣ್ಣೇಗೌಡ, ಶಾಂತಕುಮಾರ್, ಚಂದ್ರಶೇಖರ್, ಈಶ್ವರಪ್ಪ, ಅರ್ಚಕ ಅಣ್ಣೇಗೌಡ, ಪ್ರೇಮಾ, ಗೌರಮ್ಮ, ರುದ್ರಣಮ್ಮ, ಇಂದ್ರಮ್ಮ ಇತರರಿದ್ದರು.