

ಬಾಗೇಪಲ್ಲಿ: ಆಂಧ್ರಪ್ರದೇಶದ ಅರಕು ಪ್ರದೇಶದಲ್ಲಿ ಬೆಳೆಯುವ ಗಾಂಜಾವನ್ನು ಬಾಗೇಪಲ್ಲಿಯಲ್ಲಿ ಮಾರಾಟ ಮಾಡಿ, ಯುವಪೀಳಿಗೆಯನ್ನು ನಶಾ ಲೋಕಕ್ಕೆ ತಳ್ಳುತ್ತಿದ್ದ ಗಾಂಜಾ ಮಾರಾಟ ದಂಧೆಕೋರರ ಪತ್ತೆಗಾಗಿ ಬಲೆ ಬೀಸಿರುವ ಬಾಗೇಪಲ್ಲಿ ಠಾಣೆ ಪೋಲಿಸರು, ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಸೂಚನೆಯಂತೆ ಬಾಗೇಪಲ್ಲಿ ಠಾಣೆಯ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಬಾಗೇಪಲ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ದಂಧೆಕೋರರನ್ನು ಪತ್ತೆ ಹಚ್ಚಿ ಆರು ಆರೋಪಿಗಳ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಲಕ್ಷಾಂತರ ರೂ.ಬೆಲೆಬಾಳುವ ಗಾಂಜಾವನ್ನು
ವಶಕ್ಕೆ ಪಡೆದುಕೊಂಡಿದ್ದಾರೆ.
6 ಆರೋಪಿಗಳು ಬಾಗೇಪಲ್ಲಿ ಪಟ್ಟಣ ನಿವಾಸಿಗಳಾಗಿದ್ದು, ಅವರ ಮೂಲ ಹೆಸರುಗಳಿಗಿಂತ ಅಡ್ಡ ಹೆಸರುಗಳಿಂದಲೇ ಕುಖ್ಯಾತಿ ಪಡೆದಿದ್ದಾರೆ. ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕರೇ ಗಾಂಜಾ ಮಾರಾಟ ದಂಧೆಕೋರರ ಗುರಿಯಾಗಿದ್ದು, ಶಾಲಾ, ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲೇ ಗಾಂಜಾ ಮಾರಾಟ ದಂಧೆ ಹೆಚ್ಚಾಗಿ ನಡೆಸುತ್ತಿದ್ದರು ಎನ್ನಲಾಗಿದೆ. ಆರು ಆರೋಪಿಗಳ ಪೈಕಿ ಮೂವರು ಆರೋಪಿಗಳಾದ ಸೈಯದ್ ನಾಸೀರ್(ಕಾಲ), ನಯಾಜ್(ಶಾನು), ಶ್ರೀನಾಥ್ (ಬಿರಿಯಾನಿ) ಎಂಬವರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರಗೃಹಕ್ಕೆ ಕಳುಹಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಆರಕು ಗುಡ್ಡಗಾಡು ಪ್ರದೇಶದಿಂದ ಗಾಂಜಾವನ್ನು ತರಿಸಿಕೊಂಡು ಬಾಗೇಪಲ್ಲಿ ಪಟ್ಟಣದಲ್ಲಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದುಕೊಂಡ ಬಾಗೇಪಲ್ಲಿಯ ಪೊಲೀಸರು ಪಟ್ಟಣದ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೆಲ ಟೀ ಅಂಗಡಿ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ, ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಕಾರ್ಯಾಚರಣೆಯಲ್ಲಿ ಕ್ರೈಂ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಮುನಿರತ್ನಂ, ಪೊಲೀಸ್ ಪೇದೆಗಳಾದ ಮೋಹನ್, ಧನಂಜಯ, ಸಾಗರ್, ಅನಿಲ್, ರಾಜಪ್ಪ ಮತ್ತಿತರರು ಇದ್ದರು.