

ಚನ್ನಗಿರಿ: ಅರಣ್ಯ ಭೂಮಿ, ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಪಟ್ಟಣದ ತುಮ್‌ಕೋಸ್ ಮೈದಾನದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ತಹಸೀಲ್ದಾರ್ ಪಿ.ಎಸ್.ಯರ‌್ರಿಸ್ವಾಮಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಅರಣ್ಯ ಭೂಮಿ ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ನೀಡಿ ಎರಡು ವರ್ಷ ಕಳೆದಿದೆ.
ಆದರೂ ಖಾತೆ ಪಹಣಿ ನೀಡಿಲ್ಲ. ತಕ್ಷಣ ನೀಡಬೇಕು. ಕೃಷಿ ಇಲಾಖೆಯಿಂದ ಸಿಗುವಂತಹ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು.
ಕೇಂದ್ರ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆಯನ್ನು ಇಲಾಖೆ ಸಮರ್ಪಕವಾಗಿ ಜಾರಿಗೆ ತಂದಿರುವುದಿಲ್ಲ.
ಅರಣ್ಯ ಅತಿಕ್ರಮಣದಾರರಿಗೆ ಕಾಯ್ದೆಯ ಕಾನೂನು ಅರಿವು ಇದುವರೆಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಅತಿಕ್ರಮಣದಾರರ ಅರ್ಜಿ ಪರಿಶೀಲನೆ ಮಾಡುವಾಗ ಯಾವ ವರ್ಷದ ದಾಖಲೆ ಅಧಾರದ ಮೇಲೆ ಭೂಮಿಯನ್ನು ಮಂಜೂರಾತಿ ಮಾಡುತ್ತಿದೆ ಎಂಬುದನ್ನು ಸರ್ಕಾರ, ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್, ಗೌರವಾಧ್ಯಕ್ಷ ಮಲ್ಲಿಗೆರೆ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಉಪನಾಯಕನಹಳ್ಳಿ ಉಮೇಶ್ ಇದ್ದರು.