ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ ಶೀಘ್ರ

FotoJet
Published on

ಶಾಸಕ ಇಕ್ಬಾಲ್ ಹುಸೇನ್ ಭರವಸೆ

ಹಾರೋಹಳ್ಳಿ : ಕೆಲ ರೈತರು 25-30 ವರ್ಷಗಳಿಂದ ಜಮೀನು ಉಳುಮೆ ಮಾಡುತ್ತಿದ್ದರೂ ಸಾಗುವಳಿ ಚೀಟಿಯನ್ನು ಏಕೆ ವಿತರಿಸಿಲ್ಲ? ಎಂದು ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮರಳವಾಡಿ ಹೋಬಳಿಯ ಬಳೆಚೆನ್ನವಲಸೆ ಗ್ರಾಮದಲ್ಲಿ ಬಗರ್ ಹುಕುಂ ಯೋಜನೆಯಡಿಯಲ್ಲಿ ಸಾಗುವಳಿ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿ ಚೀಟಿ ವಿತರಿಸುವ ಬಗ್ಗೆ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿ, ಸ್ಥಳಕ್ಕೆ ಭೇಟಿ ನೀಡಿ, ಯಾರು ಅರ್ಹ ಫಲಾನುಭವಿಗಳು ಎನ್ನುವುದನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ವಿತರಿಸಲಾಗುವುದು ಎಂದರು. ಇದರ ಭಾಗವಾಗಿ ಟಿ.ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50, 53, 57 ನಮೂನೆ ಅಡಿಯಲ್ಲಿ ಸುಮಾರು ನೂರರಿಂದ 150 ಅರ್ಜಿ ಸಲ್ಲಿಸಿರುವವರ ದಾಖಲಾತಿ ಪರಿಶೀಲಸಿ ನಿಜವಾಗಿ ವ್ಯವಸಾಯ ಮಾಡುತ್ತಿದ್ದಾರೆಯೇ ? ಅಥವಾ ಮರಣ ಹೊಂದಿದ್ದಾರಾ? ಅನುಭವದಲ್ಲಿದ್ದಾರಾ? ಎಂದು ಪಾರದರ್ಶಕ, ಪಕ್ಷಾತೀತವಾಗಿ ವಿಲೇ ಮಾಡಬಹುದಾ ಎಂದು ಮುಖಂಡರು, ಅಧಿಕಾರಿಗಳು ಹಾಗೂ ಬಗರ್ ಹುಕುಂ ಸಮಿತಿಯ ಸದಸ್ಯರೊಂದಿಗೆ ಸ್ಥಳ ಪರಿಶೀಲಿಸಲಾಗುತ್ತಿದೆ ಎಂದರು.
ರೈತರು 25-30 ವರ್ಷಗಳಿಂದ ಉಳುಮೆ ಮಾಡುತ್ತಿದ್ದರೂ ಕೆಲವರು ಅಧಿಕಾರದಾಸೆಗಾಗಿ ರಾಜಕಾರಣ ಮಾಡಿ, ಸಾಗುವಳಿ ಚೀಟಿ ವಿತರಿಸದೆ ರೈತರಿಗೆ ಮೋಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು. ಕ್ಷೇತ್ರದ ಶಾಸಕರು ಮಂತ್ರಿಯಾಗಿದ್ದಾರೆ, ಮುಖ್ಯಮಂತ್ರಿಗಳಾಗಿದ್ದಾರೆ, ಬೇರೆ ಬೇರೆಯ ಅಧಿಕಾರಗಳು ಸಿಕ್ಕಿದ್ದರೂ ರೈತರಿಗೆ ಭೂಮಿ ಮಂಜೂರಾತಿ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಹರಿಹಾಯ್ದರು.

ಹಾರೋಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗುವುದು. ಈಗಾಗಲೇ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವಾಗಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಗೋ ಶಾಲೆ ತೆರೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
ತಹಸೀಲ್ದಾರ್ ಆರ್.ಸಿ.ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆಸಿಬಿ ಅಶೋಕ್, ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್, ಬಗರ್ ಹುಕುಂ ಸಮಿತಿ ಸದಸ್ಯರಾದ ಸೌಭಾಗ್ಯಮ್ಮ, ರಾಮಣ್ಣ, ರಾಮಕೃಷ್ಣ, ಮುಖಂಡರಾದ ಭುಜಂಗಯ್ಯ, ಕೀರಣಗೆರೆ ಜಗದೀಶ್, ಈಶ್ವರ್, ಶ್ರೀಕಂಠಯ್ಯ, ಶಿವಲಿಂಗಯ್ಯ, ದಿನೇಶ್, ಚಂದ್ರು, ಸುಶೀಲ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net