

ರಬಕವಿ/ಬನಹಟ್ಟಿ: ನಾಟಕ ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಬದುಕು, ಸಂಸ್ಕೃತಿ ಮತ್ತು ಭಾವನೆಗಳನ್ನು ಪ್ರತಿಬಿಂಬಿಸುವ ಪ್ರಬಲ ಕಲಾ ಮಾಧ್ಯಮವಾಗಿದೆ. ಉತ್ತರ ಕರ್ನಾಟಕದ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ವೇದಿಕೆ ಕಲ್ಪಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಬೇಕು ಎಂದು ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ 4 ವಿಜೇತ ಹರೀಶ ಹಿರೇಯೂರ ಹೇಳಿದರು.
ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಗದಾಳ ರಸ್ತೆಯಲ್ಲಿರುವ ಗುರು ಖಾಸಗತೇಶ್ವರ ನಾಟ್ಯ ಸಂಘದ ಸೆಟ್‌ನಲ್ಲಿ ಶನಿವಾರ ಗಂಗಿ ನೀ ಜಗ್ಗ ಬಾಡ್ ಲುಂಗಿ ಹಾಸ್ಯ ನಾಟಕದ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ತಾಳಿಕೋಟಿ ಹಾಗೂ ಕಷ್ಣಮೂರ್ತಿ ಶಾಸ್ತ್ರಿ ರಚಿಸಿರುವ ನಾಟಕವು ಹಾಸ್ಯದೊಂದಿಗೆ ಸಾಮಾಜಿಕ ಸಂದೇಶವನ್ನೂ ಒಳಗೊಂಡಿದೆ. ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಪ್ರತಿದಿನ ಮೂರು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮಂಜು ಗುಳೇದಗುಡ್ಡ, ಭವ್ಯ ಮಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಲಾವಿದರು ಅಭಿನಯಿಸುತ್ತಿದ್ದು, ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಜಾತ್ರೆಗೆ ಆಗಮಿಸುವ ಭಕ್ತರು ಹಾಗೂ ಕಲಾಭಿಮಾನಿಗಳು ನಾಟಕ ವೀಕ್ಷಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಬೆಂಬಲ ನೀಡಬೇಕು ಎಂದು ನಾಟ್ಯ ಸಂಘದ ಕಂಪನಿ ಮಾಲೀಕ ಭಾರತ ತಾಳಿಕೋಟಿ ಮನವಿ ಮಾಡಿದರು.
ಪ್ರಿಯಾ ಹಿರೇಯೂರ, ಭವ್ಯ ಮಂಗಳೂರು, ಶೇಖರ ಜವಳಗಿ, ಕಿರಣ ಆಳಗಿ, ಮಲ್ಲಿಕಾರ್ಜುನ ತುಂಗಳ ಮತ್ತಿತರರಿದ್ದರು.