ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪಕ್ಕದಲ್ಲಿ ಅಭ್ಯರ್ಥಿ ಉಮೇಶ ಮೇಟಿ, ಮಲ್ಲಿಕಾರ್ಜುನ ಮೇಟಿ, ಮಹಾದೇವಿ ಮೇಟಿ, ಮಹಾದೇವಿ ಮೇಟಿ ಇದ್ದರು.
ಬಾಗಲಕೋಟೆ: ಜಿದ್ದಾಜಿದ್ದಿನಿಂದ ಕೂಡಿರುವ ಬಾಗಲಕೋಟೆ ಉಪ ಚುನಾವಣೆ ಪ್ರಚಾರದ ಅಂಗಳಕ್ಕೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ ನೀಡಿದ್ದು, ಸುತಗುಂಡಾರ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಪ್ರಚಾರದ ಅಬ್ಬರ ಹೆಚ್ಚಿಸಿದರು.
ಮಹಿಳಾ ಮತದಾರರನ್ನೆ ಟಾರ್ಗೆಟ್ ಮಾಡಿಕೊಂಡು ಪ್ರಚಾರ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಭಾಷಣದುದ್ದಕ್ಕೂ ಪಂಚ ಗ್ಯಾರಂಟಿಗಳನ್ನು ಮೆಲಕು ಹಾಕುತ್ತಲೇ ಗ್ಯಾರಂಟಿಗಳು ಮುಂದುವರೆಯಬೇಕಾದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು ೫ ರಿಂದ ೬ ಸಾವಿರ ರೂ.ಗಳಂತೆ ವಾರ್ಷಿಕ ೫೦ ರಿಂದ ೬೦ ಸಾವಿರ ರೂ.ಗಳನ್ನು ಕಳೆದ ಮೂರು ವರ್ಷಗಳಿಂದ ಕೊಡುತ್ತ ಬಂದಿದ್ದೇವೆ. ಗ್ಯಾರಂಟಿಯಿAದ ಅಭಿವೃದ್ಧಿ ಆಗುತ್ತಿಲ್ಲವೆಂದು ಆರಂಭದಿAದಲೂ ವಿರೋಽಸುತ್ತಲೇ ಬಂದಿರುವ ಬಿಜೆಪಿಗೆ ಮತ ನೀಡುತ್ತೀರಾ ತಾಯಿ ಎಂದು ಮಹಿಳೆಯರನ್ನು ಉದ್ದೇಶಿಸಿ ಪದೇ ಪದೇ ಪ್ರಶ್ನಿಸುತ್ತಲೇ ಇದ್ದರು.
ಕಾಂಗ್ರೆಸ್ ಪಕ್ಷಕ್ಕೆ ಬರುವ ಇಂಥ ಜನಪರ ಆಲೋಚನೆಗಳು ಬಿಜೆಪಿಗೆ ಏಕೆ ಬರಲ್ಲ? ನಮಗೆ ಜನರ ಕಷ್ಟ ಗೊತ್ತಿದೆ. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದೇನೆ. ಹೀಗಾಗಿ ಇಂತ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಬರುತ್ತವೆ. ಕರೊನಾ ಸಮಯದಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿ, ಜೀವನ ಸಾಗಿಸಲು ಹೈರಾಣರಾಗಿದ್ದರು. ಅದಕ್ಕಾಗಿ ನಾವು ಪಂಚ ಗ್ಯಾರಂಟಿ ಘೋಷಣೆ ಮಾಡಿ, ಅಽಕಾರಕ್ಕೆ ಬಂದ ಬಳಿಕ ಅವುಗಳನ್ನು ಜಾರಿಗೆ ತಂದೇವು ಎಂದರು.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಇಲ್ಲ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಬಿಜೆಪಿ ಅವರು ಅಪಪ್ರಚಾರ ಮಾಡಿದರು. ಲೋಕಸಭೆ ಚುನಾವಣೆ ಬಳಿಕ ಯೋಜನೆ ನಿಂತಿವೆಯಾ? ರಾಜ್ಯದಲ್ಲಿ ಮೂರುವರೆ ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ೧.೨೬ ಕೋಟಿ ಮಹಿಳೆಯರಿಗೆ ತಿಂಗಳಿಗೆ ೨ ಸಾವಿರ ರೂ. ಬರುತ್ತಿದೆ. ಈ ವರ್ಷ ಗ್ಯಾರಂಟಿಗಳಿಗಾಗಿ ೫೨ ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ. ಈ ವರೆಗೆ ೧.೪೦ ಲಕ್ಷ ಕೋಟಿ ರೂ. ಗ್ಯಾರಂಟಿಗಳಿಗೆ ಖರ್ಚು ಮಾಡಿದ್ದೇವೆ. ಜನರಲ್ಲಿ ವಸ್ತುಗಳನ್ನು ಕೊಂಡುಕೊಳ್ಳುವ ಪ್ರಮಾಣ ಜಾಸ್ತಿ ಆಗಬೇಕು. ಆಗ ಮಾತ್ರ ಉತ್ಪಾದನೆ ಆಗುವ ವಸ್ತುಗಳು ಖರೀದಿ ಮಾಡುತ್ತಾರೆ ಎಂದು ಇಂಥ ಜನಪರ ಯೋಜನೆ ಜಾರಿಗೆ ತಂದಿದ್ದೇವೆ. ಈ ಉಪ ಚುನಾವಣೆಯಲ್ಲಿ ಬಿಜೆಪಿಯವರಿಗೆ ಬುದ್ದಿ ಕಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ನ ನನ್ನ ಸರ್ಕಾರ ಇದೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿದರೆ ಅಭಿವೃದ್ಧಿ ಕೆಲಸ ಆಗುತ್ತವೆಯಾ? ನಮ್ಮ ಸರ್ಕಾರಕ್ಕೆ ಶಕ್ತಿ ತುಂಬಬೇಕಲ್ವಾ? ನೀವೆಲ್ಲ ನನ್ನ ಕೈ ಬಲಪಡಿಸುತ್ತಾರಾ? ಹಾಗಿದ್ದರೆ ಎಚ್.ವೈ.ಮೇಟಿ ಅವರ ಸ್ವಂತ ಮಗನಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸುವ ಮೂಲಕ ದಿ. ಮೇಟಿ ಆತ್ಮಕ್ಕೆ ಶಾಂತಿ ನೀಡಬೇಕು ಎಂದು ಮತದಾರಲ್ಲಿ ಮನವಿ ಮಾಡಿದರು.
ಸಚಿವರಾದ ಭೈರತಿ ಸುರೇಶ, ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮಾಜಿ ಸಚಿವರು, ಸ್ಥಳೀಯ ಮುಖಂಡರು ಇದ್ದರು.