ತತ್ವಗಳು ದೇಗುಲ, ಮಠಗಳಿಗೆ ಸೀಮಿತವಾಗದಿರಲಿ

ಬಾಗಲಕೋಟೆ ಭೋವಿ ಗುರುಪೀಠದಿಂದ ಶ್ರಾವಣ ಮಾಸದ ಅಂಗವಾಗಿ ನಡೆದ ಶರಣಬಸವ ಪಲ್ಲಕ್ಕಿ ಉತ್ಸವದಲ್ಲಿ ಶ್ರೀಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಪಲ್ಲಕ್ಕಿಗೆ ಹೆಗಲು ಕೊಟ್ಟಿ ಹೆಜ್ಜೆ ಹಾಕಿದರು.
ಬಾಗಲಕೋಟೆ ಭೋವಿ ಗುರುಪೀಠದಿಂದ ಶ್ರಾವಣ ಮಾಸದ ಅಂಗವಾಗಿ ನಡೆದ ಶರಣಬಸವ ಪಲ್ಲಕ್ಕಿ ಉತ್ಸವದಲ್ಲಿ ಶ್ರೀಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಪಲ್ಲಕ್ಕಿಗೆ ಹೆಗಲು ಕೊಟ್ಟಿ ಹೆಜ್ಜೆ ಹಾಕಿದರು.
Published on
ಬಾಗಲಕೋಟೆ: ಮನೆಂಗಳಕ್ಕೆ ವಚನ, ಶರಣ ಧರ್ಮ ಹೊತ್ತೊಯ್ಯುತ್ತಿರುವ ಪಲ್ಲಕ್ಕಿ. ಧರ್ಮೋ ರಕ್ಷತಿ ರಕ್ಷಿತಃ, ನಾವು ಧರ್ಮವನ್ನು ರಕ್ಷಿಸಿದರೆ, ಆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಹಿರಿಯರು ಕಂಡುAಡ ಸತ್ಯದಂತೆ, ಧರ್ಮದ ತತ್ವಗಳನ್ನು ಕೇವಲ ದೇವಸ್ಥಾನ ಅಥವಾ ಮಠಗಳಿಗೆ ಸೀಮಿತಗೊಳಿಸದೆ ಜನರ ಹೊಸ್ತಿಲಿಗೇ ತಲುಪಿಸುವ ಮಹತ್ಕಾರ್ಯ ನಡೆಯಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವ ಆಶ್ರಮದಿಂದ ಹಮ್ಮಿಕೊಂಡ ಶರಣಬಸವ ಪಲ್ಲಕ್ಕಿ ಉತ್ಸವದ ನೇತೃತ್ವವಹಿಸಿ ಮಾತನಾಡಿದರು.
ಮಠದ ಪಲ್ಲಕ್ಕಿ ಉತ್ಸವವು ಕೇವಲ ಧಾರ್ಮಿಕ ಆಚರಣೆಯಷ್ಟೆ ಆಗಿರದೆ, ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಪ್ರತಿಯೊಬ್ಬರ ಮನೆಮನಗಳಿಗೆ ತಲುಪಿಸುವ ಸಾತ್ವಿಕ ಸ್ವರೂಪವಾಗಿ ರೂಪುಗೊಂಡಿವೆ. ಮನೆಗಳೇ ಮಹಾಮನೆಗಳು, ಮನಸ್ಸುಗಳೇ ಚಿಂತನ ಕೇಂದ್ರಗಳು. ೧೨ನೇ ಶತಮಾನದ ಬಸವಾದಿ ಶರಣರು ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಮಾಜದಲ್ಲಿದ್ದ ತಾರತಮ್ಯಗಳನ್ನು ಅಳಿಸಿಹಾಕಿದರು. ಅಂದಿನ ಶರಣರು ತೋರಿದ ದಾರಿಯಲ್ಲಿಯೇ, ಇಂದಿನ ಶ್ರೀಮಠಗಳು ಮತ್ತು ಶರಣರು ಧರ್ಮ ಪ್ರಸಾರದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಎಂದರು.
ಮನೆಯಂಗಳವೇ ಮಠಗಳು. ಜನರು ಪೀಠಗಳ ಬಳಿಗೆ ಬರುವುದನ್ನೇ ಕಾಯದೇ, ಪಲ್ಲಕ್ಕಿ ಉತ್ಸವದ ನೆಪದಲ್ಲಿ ಶ್ರೀಮಠವೇ ಜನರ ಮನೆಬಾಗಿಲಿಗೆ ತೆರಳುತ್ತಿದೆ. ಇದರಿಂದ ಪ್ರತಿಯೊಬ್ಬ ಭಕ್ತನ ಮನೆಯಂಗಳವೂ ಒಂದು ಪುಣ್ಯಕ್ಷೇತ್ರ ಹಾಗೂ ಮಠವಾಗಿ ಮಾರ್ಪಡುತ್ತಿದೆ. ಮನಸ್ಸುಗಳೇ ಚಿಂತನ ಕೇಂದ್ರಗಳು. ಪಲ್ಲಕ್ಕಿ ಉತ್ಸವಗಳು ಸಾಗುವ ಹಾದಿಯಲ್ಲಿ ಭಜನೆ, ವಚನ ಗಾಯನ ಮತ್ತು ಪ್ರವಚನಗಳು ನಡೆಯುತ್ತವೆ. ಇವು ಸಾಧಾರಣ ಜನರ ಮನಸ್ಸಿನಲ್ಲಿರುವ ಅಜ್ಞಾನ ಮತ್ತು ಕಷ್ಟಗಳನ್ನು ದೂರಮಾಡಿ, ಅವರ ವಿಚಾರಶಕ್ತಿಯನ್ನು ಜಾಗೃತಗೊಳಿಸುವ ನಿಜವಾದ ಚಿಂತನ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಜನಸಾಮಾನ್ಯರಿಂದ ವಚನ ರಚನೆ ಮತ್ತು ಸಾಹಿತ್ಯ ಪ್ರಸಾರ, ಶರಣ ಪರಂಪರೆಯ ಬಹುದೊಡ್ಡ ವಿಶೇಷÀತೆ ಎಂದರೆ ಅದು ಸಾಹಿತ್ಯವನ್ನು ಕೇವಲ ವಿದ್ವಾಂಸರಿಗೆ ಸೀಮಿತಗೊಳಿಸಲಿಲ್ಲ. ರೈತರು, ನೇಕಾರರು, ಮಡಿಕೆ ಮಾಡುವವರು, ದೋಣಿ ನಡೆಸುವವರಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಬರೆಯುವಂತೆ ಶರಣರು ಪ್ರೇರೇಪಿಸಿದರು ಎಂದು ತಿಳಿಸಿದರು.
ಜೇವರ್ಗಿ ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರ ಶ್ರೀಗಳು ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮಾನಸಿಕ ಶಾಂತಿ ಕಳೆದುಕೊಂಡು, ಮನಸ್ಸು ಮಲಿನಗೊಳ್ಳುತ್ತಿರುವ ಜನರಿಗೆ ಶ್ರಾವಣ ಮಾಸದಲ್ಲಿ ನಡೆಯುವ 'ವಚನ ಶ್ರವಣ'ವು ಸಂಪೂರ್ಣ ಪರಿಶುದ್ಧತೆ ನೀಡುವ ಸಂಜೀವಿನಿಯಾಗಿದೆ ಎಂದು ಹೇಳಿದರು.
ಕುಂಬಾರ ಗುರುಪೀಠದ ಗುಂಡಯ್ಯ ಶ್ರೀಗಳು ಮಾತನಾಡಿ, ಸಂಸ್ಕೃತ ಅಥವಾ ಕಠಿಣ ಗ್ರಾಂಥಿಕ ಭಾಷೆಯಲ್ಲಿದ್ದ ಧರ್ಮ ಸೂಕ್ಷ÷್ಮಗಳನ್ನು, ಜನಸಾಮಾನ್ಯರ ಆಡುಭಾಷೆಯಾದ ಕನ್ನಡ ವಚನಗಳ ಮೂಲಕ ತಿಳಿಸಿಕೊಡಲಾಗುತ್ತಿದೆ. ಪಲ್ಲಕ್ಕಿ ಮೆರವಣಿಗೆಗಳಲ್ಲಿ ವಚನ ಗಾಯನ, ವಚನ ಪಾರಾಯಣ ಯೋಜಿಸುವ ಮೂಲಕ ಯುವ ಪೀಳಿಗೆಗೆ ಶರಣರ ವಿಚಾರಗಳನ್ನು ತಲುಪಿಸಲಾಗುತ್ತಿದೆ ಎಂದರು.
ಅಲ್ಲಮಪ್ರಭು ಸಂಸ್ಥಾನದ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, ಧರ್ಮವೆಂದರೆ ಕೇವಲ ಪೂಜೆ-ಪುರಸ್ಕಾರಗಳಲ್ಲ, ಅದು ದಯೆಯೇ ಧರ್ಮದ ಮೂಲವಯ್ಯ ಎಂಬAತೆ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದಾಗಿದೆ ಎಂದು ತಿಳಿಸಿದರು.
ಕೊರಟಗೆರೆಯ ಮಹಾಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಪಲ್ಲಕ್ಕಿ ಉತ್ಸವ ಶರಣಬಸವ ಮಠದ ಸುತ್ತಮುತ್ತಲಿನ ನಗರಗಳಲ್ಲಿ ಜಾನಪದ ಕಲಾತಂಡ, ಬಸವ ಭಜನೆ ಮೂಲಕ ಸಂಚರಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net