ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆಗಾಗಿ ಕಾದು ಕುಳಿತಿರುವ ರೈತರು ಕಾರಹುಣ್ಣಿಮೆ ಪ್ರಯುಕ್ತ ಸೋಮವಾರ ನಡೆದ ಕರಿ ಹರಿಯುವ ಸಂಪ್ರದಾಯ ಸಂತಸ, ಸಂಭ್ರಮಕ್ಕೆ ಸಾಕ್ಷಿಯಾದರು.
ನಗರದ ವಲ್ಲಾಭಾಯಿ ಚೌಕನಲ್ಲಿ ಎತ್ತುಗಳನ್ನು ಕರಿ ಹರಿಯಲಾಯಿತು. ಕಿಲ್ಲಾ ಓಣಿಯ ಬಸವಪ್ರಭು ಸರನಾಡಗೌಡ ಅವರ ಬಿಳಿ ಬಣ್ಣದ ಎತ್ತು ಕರಿ ಹರಿಯಿತು. ಈ ಸಾರಿ ಬಿಳಿ ಬಣ್ಣದ ಎತ್ತು ಕರಿ ಹರಿದಿದ್ದರಿಂದ ಬಿಳಿ ಜೋಳ ಉತ್ತಮವಾಗಿ ಬರುತ್ತದೆ ಎಂದು ವಾಡಿಕೆಯಂತೆ ತಿಳಿಸಲಾಯಿತು. ಒಟ್ಟು ಐದು ಎತ್ತುಗಳು ಭಾಗವಹಿಸಿದ್ದವು. ಎತ್ತು ಕರಿ ಹರಿಯುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕೃಷಿಕರು ಸಂಭ್ರಮಿಸಿದರು. ಕುಣಿದು ಕುಪ್ಪಳಿಸತ್ತಾ, ಭಾಜಾ ಭಜಂತ್ರಿಯೊAದಿಗೆ ಎತ್ತಿನ ಮೆರವಣಿಗೆ ಮಾಡಲಾಯಿತು.
ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ವಿವಿಧ ಬಣ್ಣಬಣ್ಣಗಳಿಂದ ಅಲಂಕರಿಸಲಾಗಿತ್ತು. ರಿಬ್ಬನ್ ಕಟ್ಟಿ ಶೃಂಗರಿಸಲಾಗಿತ್ತು. ಬಾಗಲಕೋಟೆ ನಗರ ಸೇರಿದಂತೆ ಸುತ್ತಮುತ್ತಲೀನ ಗ್ರಾಮಗಳ ಜನರು ಕರಿ ಹರಿಯುವನ್ನು ನೋಡಲು ಆಗಮಿಸಿದ್ದರು.
ಇನ್ನು ಕಾರಣ ಹುಣ್ಣಿಮೆ ಅಂಗವಾಗಿ ರಾಸುಗಳಿಗೆ ಮಗಡಾ, ಹಗ್ಗ, ಮೂಗದಾನ, ಹಣಿಕಟ್ಟ, ಬಾರ್ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ರೈತರು ಮುಗಿ ಬಿದ್ದಿದ್ದರು. ಕಾರ ಹುಣ್ಣಿಮೆ ಸಂಭ್ರಮ, ಸಡಗರದಿಂದ ಆಚರಿಸಿದ್ದು ರೈತರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು.