ಹೋಳಿ ಆಚರಣೆಯಲ್ಲಿ ಬಾಗಲಕೋಟೆಯ ಸಾಂಸ್ಕೃತಿಕ ಬದುಕು ಅಡಗಿದೆ. ಇಲ್ಲಿರುವ ಐದು ಪೇಟೆಗಳಲ್ಲಿ. ಕಿಲ್ಲಾ, ವೆಂಕಟಪೇಟೆ, ಹೊಸಪೇಟೆ, ಹಳಪೇಟೆ, ಜೈನ್‌ಪೇಟೆಯಿಂದ ಒಂದೊ0ದು ದಿನ ಬಣ್ಣದಾಟ ನಡೆಯುತ್ತಿದೆ. ಮುಳಗಡೆಯಾದ ಬಳಿಕ ಮೂರು ಭಾಗವಾಗಿರುವ ಬಾಗಲಕೋಟೆ ವಿದ್ಯಾಗಿರಿ, ನವನಗರಕ್ಕೆ ಹಬ್ಬ ವಿಸ್ತರಣೆಗೊಂಡಿದೆ. ಪೇಶ್ವೆಗಳ ಆಡಳಿತದಲ್ಲಿ ನಿಶಾನೆಗಳನ್ನು ಹೊತ್ತ ಸರನಾಡಗೌಡ, ಸರದೇಸಾಯಿ, ವೈಜಾಪುರ, ಶೆಟ್ಟರ, ಕುಲಕರ್ಣಿ ಬಾಬುದಾರರು ಈ ಉತ್ಸವಕ್ಕೆ ವಾರಸುದಾರರಾಗಿದ್ದಾರೆ. ಹುಣ್ಣಿಮೆಯ ದಿನ ಈ ಬಾಬುದಾರರು ಸೇರಿ ಓಣಿಯ ಪ್ರಮುಖರು ಒಗ್ಗೂಡಿಕೊಂಡು ದಲಿತ ಕೇರಿಯ ಬಾಬುದಾರ ಖಾತೆದಾರರ ಮನೆಗೆ ತೆರಳಿ ಹಬ್ಬದ ಆಚರಣೆಗೆ ವೀಳ್ಯೆದೆಲೆ ಮೂಲಕ ಆಹ್ವಾನ ನೀಡುತ್ತಾರೆ. ಅಲ್ಲಿಂದಲೇ ಕಿಚ್ಚು ತಂದು ಬೆಳಗಿನಜಾವ ಹುಬ್ಬಾ ನಕ್ಷತ್ರ ಗೋಚರಿಸುತ್ತಿದ್ದಂತೆ ಕಿಲ್ಲಾದಲ್ಲಿ ಮೊದಲಿಗೆ ಕಾಮದಹನ ಮಾಡಲಾಗುತ್ತದೆ. ನಂತರ ಹೋಳಿ ಆಚರಣೆ ನಡೆಯುತ್ತದೆ.