ಬಾಗಲಕೋಟೆ ಬಿವಿವಿ ಸಂಘದ ಹಾನಗಲ್ ಕುಮಾರೇಶ್ವರ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಬೆಂಗಳೂರಿನ ಲಿವಿಯಾನ್ ಬಯೋಲ್ಯಾಬ್ಸ್ ಪ್ರೆÊವೇಟ್ ಲಿಮಿಟೆಡ್‌ನ ಸಂಸ್ಥಾಪಕ ಡಾ. ಶಿವಶಂಕರ ಎನ್.ಜಿ. ಅವರು ಪದವಿ ಪ್ರದಾನ ಮಾಡಿದರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಸಾಸನೂರ ಇತರರು ಇದ್ದರು.
ಬಾಗಲಕೋಟೆ: ವಿದ್ಯಾರ್ಥಿಗಳು ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿ, ಸಮಾಜಕ್ಕೆ ಮಹತ್ವದ ಕೊಡುಗೆ ನೀಡಬೇಕು ಎಂದು ಬೆಂಗಳೂರಿನ ಲಿವಿಯಾನ್ ಬಯೋಲ್ಯಾಬ್ಸ್ ಪ್ರೆÊವೇಟ್ ಲಿಮಿಟೆಡ್‌ನ ಸಂಸ್ಥಾಪಕ ಡಾ. ಶಿವಶಂಕರ ಎನ್.ಜಿ. ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬುಧವಾರ ಬಿವಿವಿ ಸಂಘದ ಹಾನಗಲ್ ಕುಮಾರೇಶ್ವರ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಆಯೋಜಿಸಿದ್ದ ಬಿ.ಫಾರ್ಮ್, ಎಂ.ಫಾರ್ಮ್ ಹಾಗೂ ಫಾರ್ಮ್-ಡಿ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.
ಉದ್ಯೋಗಿಯಾಗಿರಲಿ ಅಥವಾ ಉದ್ಯೋಗದಾತರಾಗಿರಲಿ, ಪ್ರತಿಯೊಬ್ಬರಿಗೂ ಸಾಧನೆ ಮಾಡಲು ಸಮಾನ ಅವಕಾಶಗಳಿವೆ. ಕೌಶಲ್ಯ, ಶಿಸ್ತು, ಸಮಯಪಾಲನೆ, ನಿರಂತರ ಅಭ್ಯಾಸ ಹಾಗೂ ಪರಿಶ್ರಮ ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಹಣವೊಂದೇ ಜೀವನದ ಮುಖ್ಯ ಗುರಿಯಾಗಬಾರದು. ಜ್ಞಾನ, ತಾಳ್ಮೆ, ತಂಡದ ಕಾರ್ಯಕ್ಷಮತೆ ಹಾಗೂ ಸಮಾಜ ಸೇವೆಯ ಮನೋಭಾವವೂ ವ್ಯಕ್ತಿಯ ಬೆಳವಣಿಗೆಗೆ ಅಗತ್ಯ. ಫಾರ್ಮಸಿ ಎಂದರೆ ಕೇವಲ ಮಾತ್ರೆ ತಯಾರಿಸುವುದಲ್ಲ, ಆರೋಗ್ಯವಂತ ಸಮಾಜ ಮತ್ತು ದೇಶ ನಿರ್ಮಾಣದಲ್ಲಿ ಫಾರ್ಮಸಿಸ್ಟ್ಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ್ ಮಾತನಾಡಿ, ಎಐ ಬರಬಹುದು, ರೋಬೋಟ್‌ಗಳು ಬರಬಹುದು, ಆದರೆ ರೋಗಿಗೆ ಧೈರ್ಯ ತುಂಬುವ ಮಾನವೀಯ ಸ್ಪರ್ಶವನ್ನು ಯಾವುದೂ ಬದಲಿಸಲಾರದು. ಕರ್ನಾಟಕ ನಿಮ್ಮನ್ನು ನಂಬಿದೆ, ಭಾರತ ನಿಮ್ಮನ್ನು ಎದುರು ನೋಡುತ್ತಿದೆ. ವಿಶ್ವ ಫಾರ್ಮಸಿ ಕ್ಷೇತ್ರದ ನಾಯಕರಾಗಿ ಬೆಳೆಯಿರಿ ಎಂದು ಪದವೀಧರರಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಸಾಸನೂರ ಮಾತನಾಡಿ, ಇಂದು ನಿಮ್ಮ ಜೀವನದ ಅತ್ಯಂತ ಮಹತ್ವದ ದಿನ. ನೀವು ಕೇವಲ ಪದವಿಯನ್ನು ಪಡೆಯುತ್ತಿಲ್ಲ. ಸಮಾಜದ ಆರೋಗ್ಯದ ಜವಾಬ್ದಾರಿಯನ್ನೂ ಹೊರುತ್ತಿದ್ದೀರಿ. ನÀಮ್ಮ ಫಾರ್ಮಸಿ ಕಾಲೇಜು ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡು ಬಾಗಲಕೋಟೆಯಂತಹ ಪ್ರದೇಶದಿಂದಲೂ ಜಾಗತಿಕ ಮಟ್ಟದ ಸಂಶೋಧನೆ ನಡೆಸಬಹುದು ಎಂಬುದನ್ನು ತೋರಿಸಿಕೊಡಬೇಕು ಎಂದರು.
೧೬೩ ಪದವೀಧರರಿಗೆ ಪದವಿ ಪ್ರದಾನ
ಸಮಾರಂಭದಲ್ಲಿ ೧೦೦ ಬಿ.ಫಾರ್ಮ್, ೩೯ ಎಂ.ಫಾರ್ಮ್ ಹಾಗೂ ೨೪ ಫಾರ್ಮ್-ಡಿ ಸೇರಿದಂತೆ ಒಟ್ಟು ೧೬೩ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಪ್ರಾಚಾರ್ಯ ಡಾ.ವೈ ಶ್ರೀನಿವಾಸ್, ಡಾ. ಜಯದೇವ ಹಿರೇಮಠ, ಡಾ. ವಿ.ಎಂ. ಚಂದ್ರಶೇಖರ, ಡಾ. ಅನಿತಾ ದೇಸಾಯಿ, ಡಾ. ವಿ.ಎಂ. ಕಿತ್ತೂರ, ಡಾ. ಶರಣಬಸವ ಬಿರಾದಾರ, ಡಾ. ಪೂರ್ಣಿಮಾ ಹೊಸಮಠ, ಪ್ರಸಾದ ಮಳಗಿ, ಸುಶ್ಮಿತಾ ಮೂಡಲಗಿ, ಸಂಜಯ ಹಾವರಗಿ ಹಾಗೂ ಡಾ. ಅಭಿರಾಮಿ ಪಾನೀಕರ ಇತರರು ಇದ್ದರು.