

ಬಾಗಲಕೋಟೆ: ಅನ್ಯ ಜಾತಿ, ಪಂಗಡದ ತಳವಾರ ಪರಿವಾರ ಜಾತಿಗಳಿಗೆ ಎಸ್ಟಿ( ಪರಿಶಿಷ್ಟ ಪಂಗಡ) ಜಾತಿ ಪ್ರಮಾಣ ನೀಡುವುದು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಸಭಾ ಬಾಗಲಕೋಟೆ ಜಿಲ್ಲಾ ಘಟಕ ನೇತೃತ್ವದಲ್ಲಿ ಸಮಾಜದ ಬಾಂಧವರು ಮಂಗಳವಾರ ಸಚಿವ ಬಿ.ಶ್ರೀರಾಮಲು ಅವರಿಗೆ ಘೇರಾವ ಹಾಕಿದ ಘಟನೆ ನಗರದಲ್ಲಿ ನಡೆಯಿತು.
ನನವನಗರ ಬಿಜೆಪಿ ಜಿಲ್ಲಾ ಕಚೇರಿಗೆ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಚಿವ ಶ್ರೀರಾಮಲು ಅವರನ್ನು ತಡೆದ ಸಮಾಜದ ಬಾಂಧವರು ಸಿಎಂ ಬಸವರಾಜ ಬೊಮ್ಮಾಯಿ, ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಲ್ಲೆಯ ತಹಸೀಲ್ದಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅನ್ಯ ಜಾತಿಯವರಿಗೆ ಪ್ರಭಾವ ಬಳಿಸಿ ಎಸ್ಟಿ ಪ್ರಮಾಣ ನೀಡಲಾಗುತ್ತಿದೆ. ಅದರಲ್ಲೂ ರಬಕವಿ-ಬನಹಟ್ಟಿ ಶಾಸಕ ಸಿದ್ದು ಸವದಿ, ಜಮಖಂಡಿ ಮಾಜಿ ಶ್ರೀಕಾಂತ ಕುಲಕರ್ಣಿ ತಹಸೀಲ್ದಾರಗಳ ಮೇಲೆ ಒತ್ತಡ ಹಾಕಿ ಪ್ರಮಾಣ ಪತ್ರ ಕೊಡಿಸುತ್ತಿದ್ದಾರೆ. ಇದರಿಂದ ನಿಜವಾದ ಮೀಸಲಾತಿ ಪಡೆದ ಸಮಾಜಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.
ಕೋಲಿ ಜಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ. ಆ ಜಾತಿಯ ಪರಿಶಿಷ್ಟ ಪಂಗಡಗಳಿಗೆ ಎಸ್ಟಿ ಪ್ರಮಾಣ ನೀಡುವುದು ಕೂಡಲೇ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಸುಳ್ಳು ಜಾತಿಯ ಪ್ರಮಾಣ ಪತ್ರ ನೀಡಬಾರದು ಎಂದು ಹಕ್ಕೊತ್ತಾಯ ಮಂಡಿಸಿದರು.
ಅಲ್ಲದೆ ಕೂಡಲೇ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸುಳ್ಳು ಜಾತಿ ಪ್ರಮಾಣ ನೀಡಬಾರದು ಎಂದು ನಿರ್ದೇಶನ ನೀಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಶ್ರೀರಾಮಲು ಬೆಂಬಲಿಗರು ಹಾಗೂ ಮಹಾಸಭಾ ನಾಯಕರ ನಡುವೆ ಮಾತಿ ಜಟಾಪಟಿ ನಡೆಯಿತು. ಕೊನೆಗೆ ಪೊಲೀಸರು ಸಮಾಧಾನ ಪಡಿಸಿದರು. ತಕ್ಷಣಲ್ಲಿ ಶ್ರೀರಾಮಲು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಮೊಬೈಲ್ ಕರೆ ಮಾಡಿ ತಕ್ಷಣಕ್ಕೆ ಅನ್ಯ ಜಾತಿಯವರಿಗೆ ಪ್ರಮಾಣ ಪತ್ರ ನೀಡಬಾರದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಮುಖಂಡರಾದ ಸುಭಾಸ ಗಸ್ತಿ , ಜಯರಾಜ ಹಾದಿಕರ, ಲಕ್ಷ್ಮಣ ಮಾಳಗಿ, ಬಸವರಾಜ ತಳವಾರ, ಪ್ರಕಾಶ ನಾಯಕ, ಪ್ರಹ್ಲಾದ ಸೊನ್ನ, ರಮೇಶ ಮಳ್ಳಿ ಇತರರು ಇದ್ದರು.