

ಬಾಗಲಕೋಟೆ: ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ. ಜ್ಞಾನ ಜೊತೆಗೆ ವಿವಿಧ ರೀತಿ ಕೌಶಲಗಳನ್ನು ಏಕಕಾಲಕ್ಕೆ ಕಲಿಸಲಾಗುತ್ತದೆ. ಜಾಗತಿಕ ಬೆಳವಣಿಗೆ ಮಾದರಿಯಾಗಿ ಇಟ್ಟುಕೊಂಡು ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು ಹೂಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಚೇರಮನ್, ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಹೇಳಿದರು.
ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವೇಶ್ವರ ಕಲಾ ಹಾಗೂ ಮಹಾವಿದ್ಯಾಲಯ ಅಮೃತ ಮಹೋತ್ಸವ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಕಲಿಕೆ ಸಾಮರ್ಥ್ಯ ಹಾಗೂ ಮಗುವಿನ ಮೆದುಳು ಸಮಗ್ರವಾಗಿ ಬೆಳವಣಿಗೆ, ವಿಶ್ವಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಗಮನದಲ್ಲಿಟ್ಟುಕಂಡು ಪಠ್ಯ ರೂಪಿಸಲಾಗಿದೆ. ಶಿಕ್ಷಣದ ಮೊದಲ ೫ ವರ್ಷ ಬಹಳ ಮುಖ್ಯ. ಅದನ್ನು ಆಧಾರಿಸಿ ನೀತಿ ರಚಿಸಲಾಗಿದೆ. ದೇಶದಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಗೆ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿ ಹಿನ್ನಲೆ ಇದೆ. ಚಾಲುಕ್ಯರ ಕಾಲದಲ್ಲಿ ಬಾಗಲಕೋಟೆ ಜಿಲ್ಲೆಯು ರಾಜಧಾನಿಯಾಗಿತ್ತು. ಶಿಲ್ಪ ಕಲೆ ಇತರರಿಗೆ ಮಾದರಿಯಾಗಿತ್ತು. ಹಿಂದುಳಿದ ಪ್ರದೇಶವಾಗಿದ್ದ ಈ ಭಾಗದಲ್ಲಿ ಬಿವಿವಿ ಸಂಘದ ಶಿಕ್ಷಣದ ಕ್ರಾಂತಿ ಮಾಡಿದೆ. ಬಾಗಲಕೋಟೆ ಇದೀಗ ಶಿಕ್ಷಣದ ಹಬ್ ಆಗಿದೆ. ಮುಂದಿನ ದಿನಗಳಲ್ಲಿ ಸಂಶೋಧನೆ ಹಬ್ ಆಗಿ ರೂಪುಗೊಳ್ಳಬೇಕು ಎಂದ ಅವರು, ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ವ್ಯಕ್ತಿ ಅಲ್ಲ ಶಕ್ತಿ ಅಂತ ಬಣ್ಣಿಸಿದರು.
ರಾಜ್ಯಸಭಾ ಮಾಜಿ ಸದಸ್ಯ, ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರ, ಸಂಸ್ಥೆಗಳು ಅನೇಕ ಸವಾಲುಗಳನ್ನು ಎದುರಿಸುತ್ತೀವೆ. ಹೊಸ ಶಿಕ್ಷಣ ನೀತಿ ಚನ್ನಾಗಿದೆ. ಆದರೇ ಅನುಷ್ಠಾನ ಸುಲಭದ ಮಾತಲ್ಲ. ಬಹಳ ಕಠಿಣವಿದೆ. ಬೇಬಿ ಸಿಟಿಂಗ್, ನರ್ಸರಿಗಳನ್ನು ಈ ನೀತಿಯಲ್ಲಿ ನಿರ್ಲಕ್ಷಿಸಲಾಗಿದೆ. ಸಾರ್ವಜನಿಕರಲ್ಲಿ ಐಎಎಸ್ ಅಽಕಾರಿಗಳ ಬಗ್ಗೆ ಶೇ. ೮೦ ರಷ್ಟು ಕೆಟ್ಟ ಭಾವನೆ ಇದೆ. ಕಾರಣ. ಅವರ ನೀತಿ, ನಿರೂಪಣೆ, ಆಡಳಿತ ಶೈಲಿ ಅನುಕೂಲಕರವಾಗಿಲ್ಲ. ಶಿಕ್ಷಣ ಜ್ಞಾನವಾಗಿ ಉಳಿದಿಲ್ಲ. ಉದ್ಯೋಗ ಪಡೆಯುವ ಸಾಧನವಾಗಿದೆ. ಹಳ್ಳಿಗಳು ದೇಶದ ಆತ್ಮ ಎನ್ನುತ್ತೇವೆ. ಆದರೇ ಹಳ್ಳಿಗಳು ಅನಾಥವಾಗುತ್ತೀವೆ. ಹಳ್ಳಿಗಳು ಉಳಿದರೇ ದಿಲ್ಲಿ ಉಳಿಯುತ್ತದೆ. ಇಲ್ಲವಾದಲ್ಲಿ ಇಲ್ಲ. ರೈತ ಈ ದೇಶದ ಬೆನ್ನೆಲಬು ಎನ್ನುತ್ತೇವೆ ಆದರೇ ಭಿಕ್ಷೆ ಬೇಡುತ್ತಿದ್ದಾನೆ. ಲಕ್ಷಾಂತರ ಇಂಜಿನಿಯರಗಳು ಕೆಲಸವಿಲ್ಲದೆ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಹೀಗಾಗಿ ಅನುಭವ ಇರುವವರು ಶಿಕ್ಷಣ, ಕೌಶಲ ನೀತಿ ರೂಪಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಈ ಹಿಂದೆ ಶಾಲಾ, ಕಾಲೇಜು ಸ್ಥಾಪಿಸುವುದು ಕಷ್ಟಕರವಾಗಿತ್ತು. ಕೇವಲ ೨೦, ೩೦ ಸಾವಿರ ಜನಸಂಖ್ಯೆ ಇದ್ದ ಬಾಗಲಕೋಟೆಯಲ್ಲಿ ಇಲ್ಲಿನ ವರ್ತಕರು ಕಾಲೇಜುಗಳನ್ನು ಸ್ಥಾಪಿಸಿದರು. ತಮ್ಮ ಅಂಗಡಿಗಳಲ್ಲಿ ಬಿವಿವಿ ಸಂಘಕ್ಕಾಗಿ ದೇಣಿಗೆ ಸಂಗ್ರಹಿಸಲು ಡಬ್ಬಿ ಇಡುತ್ತಿದ್ದರು. ರೈತರು, ವರ್ತಕರು ತಮಗೆ ಬಂದ ಆದಾಯದಲ್ಲಿ ಮೀಸಲಿಟ್ಟು ಡಬ್ಬಿಯಲ್ಲಿ ಹಾಕುತ್ತಿದ್ದರು. ಬಾಗಲಕೋಟೆ ಹಿರಿಯ ಮುಂದಾಲೋಚನೆಯಿಂದಾಗಿ ಸಂಘವು ಹೆಮ್ಮರವಾಗಿ ಬೆಳೆದು ನಿಂತಿದೆ. ಪಲ್ಲೇದ ಬಸಣ್ಣ ಸೇರಿದಂತೆ ಅನೇಕ ಮಹನೀಯರು ಆಗಿ ಹೋಗಿದ್ದಾರೆ. ಕೆಎಲ್‌ಇ, ಬಿವಿವಿ ಸಂಘದ ನಡುವೆ ಸಂಬಂಧ ಬಹಳ ವರ್ಷಗಳಿಂದ ಅನೂನ್ಯವಾಗಿದೆ ಎಂದ ಅವರು, ಹೊಸ ಶಿಕ್ಷಣ ನೀತಿಯಿಂದ ಆಗಿರುವ ಸಮಸ್ಯೆಗಳ ಕುರಿತು ಅನೇಕರು ತಿಳಿಸಿದರು. ಅದನ್ನು ಬಗೆ ಹರಿಸಲು ಬಸವರಾಜ ಪಾಟೀಲ ಸೇಡಂ ಅವರು ನೇತೃತ್ವ ವಹಿಸಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸೇಡಂ ಅವರು ಉತ್ತಮ ಸಂಪರ್ಕ, ಸಂಬಂಧ ಇದೆ ಎಂದು ತಿಳಿಸಿದರು.
ಬಿವಿವಿ ಸಂಘದ ಅಧ್ಯಕ್ಷ, ಚರಂತಿಮಠ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಪ್ರೊ.ಜಿ.ಸಿ.ತಲ್ಲೂರ, ಪ್ರೊ.ತೇಜಸ್ವಿ ಕಟ್ಟಿಮನಿ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿರುವರು.