ನ.೧೯ ರಂದು ಬಾಗಲಕೋಟೆ ರಾಷ್ಟ್ರೀಯ ಸಂಗೀತೋತ್ಸವ

bkt-17-6
ಬಾಗಲಕೋಟೆ ನಗರದಲ್ಲಿ ನಟರಾಜ ಸಂಗೀತ ವಿದ್ಯಾಲಯದ ಅಧ್ಯಕ್ಷ ಕೇಶವ ಜೋಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಲಾವಿದರಾದ ಪ್ರವೀಣ ಮಂಕಣಿ, ಸುನೀಲ ಮಠ, ವಿಷ್ಣು ಜೋಶಿ, ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಬಾಗಲಕೋಟೆ ರಾಷ್ಟ್ರೀಯ ಸಂಗೀತೋತ್ಸವ ನಗರದಲ್ಲಿ ನ.೧೯ ರಂದು ನವನಗರದ ಕಲಾಭವನದಲ್ಲಿ ಆಯೋಜಿಸಲಾಗಿದ್ದು, ಅಂತರಾಷ್ಟ್ರೀಯ ಕಲಾವಿದರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ನಟರಾಜ ಸಂಗೀತ ವಿದ್ಯಾಲಯದ ಅಧ್ಯಕ್ಷ ಕೇಶವ ಜೋಶಿ ಹೇಳಿದರು.
ನಟರಾಜ ಸಂಗೀತ ವಿದ್ಯಾಲಯ ಮತ್ತು ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಟರಾಜ ಸಂಗೀತ ವಿದ್ಯಾಲಯದ ಪಂ. ಆರ್.ಎಚ್. ಮೋರೆ ಶಿಷ್ಯ ವೃಂದ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ವೇಳೆ ೨೫ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿರುವ ಅನೋಖೆ ತಬಲಾ ವಾದಕ ಪ್ರಶಸ್ತಿಯನ್ನು ಧಾರವಾಡದ ಪಂ.ರಘುನಾಥ ನಾಕೋಡ ಅವರಿಗೆ ನೀಡಿ ಗೌರವಿಸಲಾಗುವದು, ಸ್ಥಳೀಯ ೩೨ ಕಲಾವಿದರಿಂದ ತಬಲಾ ಸೋಲೋ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟರಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಮೂಹ ಗಾಯನ, ತಬಲಾವಾದನ ಕಾರ್ಯಕ್ರಮ ಜರುಗಲಿದ್ದು, ಧಾರವಾಡದ ಐಶ್ವರ್ಯ ದೇಸಾಯಿ ಅವರ ಗಾಯನ, ಮಂಗಳೂರಿನ ಅಂಕುಶ ನಾಯಕ ಅವರ ಸಿತಾರ, ದಿಲ್ಲಿಯ ಡಾ. ಬಿಪುಲ್ ರೇ ಅವರ ಸಂತೂರ ಪದ್ಮಶ್ರೀ ಪಂ. ಧಾರವಾಡದ ಎಂ. ವೆಂಕಟೇಶಕುಮಾರ ಅವರ ಗಾಯನ, ರಘುನಾಥ ನಾಕೋಡ ಅವರ ತಬಲಾ, ಡಾ.ರವಿಕಿರಣ ನಾಕೋಡ ಅವರ ತಬಲಾ, ಡಾ. ವಿಜಯಕುಮಾರ ಪಾಟೀಲ ಅವರ ಗಾಯನ, ಮುಂಬಯಿನ ಪಂ. ರೋಣು ಮುಯಜುಮ್ದಾರ ಅವರ ಬಾನ್ಸೂರಿ, ಮೈಸೂರಿನ ಮೈಸೂರ ಮಂಜುನಾಥ ಅವರ ವಯೋಲಿನ್ ವಾದನ ಜರುಗಲಿದೆ ಎಂದರು. ತಬಲಾ ಸಹ ಕಲಾವಿದರಾಗಿ ಪಂ. ರಾಜೇಂದ್ರ ನಾಕೋಡ, ಡಾ. ರವಿಕಿರಣ ನಾಕೋಡ, ಕೇಶವ ಜೋಶಿ, ಮೃದಂಗದಲ್ಲಿ ಅನಿರುದ್ದ ಭಟ್ ಹಾರ್ಮೋನಿಯಂದಲ್ಲಿ ನರೇಂದ್ರ ನಾಯಕ, ಸತೀಶ ಕೊಳ್ಳಿ ಸಾಥಿ ನೀಡಲಿದ್ದಾರೆ.
ಶನಿವಾರ ಸಂಜೆ ೬ ಗಂಟೆಗೆ ನವನಗರದ ಕಲಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಚರಂತಿಮಠ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಉದ್ಘಾಟಿಸಲಿದ್ದಾರೆ. ಹಿರಿಯ ತಬಲಾ ವಾದಕ ಪಂ. ಆರ್.ಎಚ್. ಮೋರೆ ಗೌರವ ಅಧ್ಯಕ್ಷತೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಮಾಜಿ ಶಾಸಕ ಎಚ್.ವೈ.ಮೇಟಿ, ಮುಖಂಡ ಮಲ್ಲಿಕಾರ್ಜುನ ಚರಂತಿಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಖ್ಯಾತ ಸಾಂಸ್ಕೃತಿಕ ಸಂಘಟಕ, ಧಾರವಾಡದ ನಿಜಗುಣಿ ರಾಜಗುರು, ಹೈಕೋರ್ಟ ನ್ಯಾಯವಾದಿ ಧಾರವಾಡದ ಉದಯ ದೇಸಾಯಿ, ಉದ್ಯಮಿ ಪವನ ಸೀಮಿಕೇರಿ ಪಾಲ್ಗೊಳ್ಳುವರು.
ಕಲಾವಿದರಾದ ಪ್ರವೀಣ ಮಂಕಣಿ, ಸುನೀಲ ಮಠ, ವಿಷ್ಣು ಜೋಶಿ, ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net