

ಬಾಗಲಕೋಟೆ: ಕಬ್ಬಿನ ಬೆಲೆ ನಿಗದಿಗೊಳಿಸುವ ಕುರಿತು ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದು ಸರ್ಕಾರ ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಭೆ ಮತ್ತೆ ವಿಫಲವಾಗಿದೆ. ಮಂಗಳವಾರ ಬೆಳಗ್ಗೆಯಿಂದ ಸಂಜೆ ವರೆಗೆ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆದರು ಒಮ್ಮತ ಮೂಡಲಿಲ್ಲ.
ಇಲ್ಲಿನ ಜಿಲ್ಲಾಡಳಿತ ಭವನದ ನ್ಯೂ ಅಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧ್ಯಕ್ಷತೆಯಲ್ಲಿ ಜಲ ಸಂಪನ್ಮೂಲ ಗೋವಿಂದ ಕಾರಜೋಳ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೆನಕೊಪ್ಪ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ಸಭೆ ಮತ್ತೆ ವಿಫವಾಯಿತು.
ಬೆಲೆ ನಿಗದಿ ವಿಚಾರದಲ್ಲಿ ಏರ್ಪಡಿಸಿದ್ದ ಸಂಧಾನ ಅಂತಿಮ ಘಟ್ಟ ತಲುಪಲಿಲ್ಲ. ಜಿಲ್ಲೆಯಲ್ಲಿ ರನ್ನ ಸಹಕಾರಿ ಸಕ್ಕರೆಯನವರು ಪ್ರತಿ ಟನ್ ೨೯೦೦ ರೂ. ಬೆಲೆ ನೀಡುತ್ತಿದ್ದಾರೆ. ಅದರಂತೆ ಪ್ರತಿ ಟನ್ ೨೯೦೦ ಕೊಡುವಂತೆ ಕಬ್ಬು ಬೆಳೆಗಾರರ ಪಟ್ಟು ಹಿಡಿದರು. ಆದರೇ ಇದಕ್ಕೆ ಖಾಸಕಿ ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ ಬಂದಿದ್ದ ಪ್ರತಿನಿಧಿಗಳು ಒಪ್ಪಲಿಲ್ಲ. ಈ ವೇಳೆ ಹೋರಾಟಗಾರರು, ಮುಖಂಡರು ಸಚಿವರನ್ನು ಅಡ್ಡಗಟ್ಟಿ ನೀವು ಬೆಲೆ ಘೋಷಣೆ ಮುಖ್ಯಮಂತ್ರಿಗಳಿಗೆ ತಿಳಿಸಬೇಕು ಎಂದು ಹಠ ಹಿಡಿದರು.
ಆಗ ಸಚಿವ ಸಿ.ಸಿ.ಪಾಟೀಲ ಇನ್ನೇರಡು ದಿನ ಸಮಯ ಕೊಡಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿ ಬೆಲೆ ಅಂತಿಮಗೊಳಿಸುತ್ತೇವೆ ಭರವಸೆ ನೀಡಿದರು. ಇದರಿಂದ ಆಕ್ರೋಶಗೊಂಡ ರೈತರು ಸಚಿವರನ್ನು ಅಡ್ಡಗಟ್ಟಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿದರು. ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ. ಸಕ್ಕರೆ ಕಾರ್ಖಾನೆಗಳು ಹೇಳಿದ್ದ ಅಂತಿಮವೇ? ಸರ್ಕಾರಕ್ಕಿಂತ ಅವರೇ ದೊಡ್ಡವರಾ?, ಕಾರ್ಖಾನೆಗಳ ಒತ್ತಡಕ್ಕೆ ಮಣಿಯುತ್ತಿದ್ದೀರಿ. ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾರೂ ಬಂದಿಲ್ಲ ಎಂದು ಕಿಡಿಕಾರಿದರು. ಬಳಿಕ ಸಚಿವ ಸಿ.ಸಿ.ಪಾಟೀಲ ರೈತರಿಗೆ ತಾಳ್ಮೆ ಕಳೆದುಕೊಳ್ಳಬೇಡಿ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು ನಿರ್ಗಮಿಸಿದರು. ಒಟ್ಟಾರೆ ಸಭೆ ಸಂಪೂರ್ಣವಾಗಿ ವಿಫಲವಾಯಿತು.
ಸಭೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶುಗರ್ ಕೇನ್ ಆಯುಕ್ತ ಶಿವಾನಂದ ಕಲಕೇರಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಜಯಪ್ರಕಾಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಣೇಶ, ಅಪರ ಜಿಲ್ಲಾಕಾರಿ ಮಹಾದೇವ ಮುರಗಿ, ಉಪವಿಭಾಗಾಕಾರಿಗಳಾದ ಸಿದ್ದು ಹುಳ್ಳೊಳ್ಳಿ, ಶ್ವೇತಾ ಬೀಡಿಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ ಸೇರಿದಂತೆ ರೈತರ ಮುಖಂಡರು, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಉಪಸ್ಥಿತರಿದ್ದರು.