ಮಧ್ವಮತ ಪ್ರಚಾರಕ್ಕೆ ಉತ್ತರ ಭಾರತಕ್ಕೆ ಬನ್ನಿ..!

BKT NEWS 2-1
Published on

ಬಾಗಲಕೋಟೆ: ಉತ್ತರ ಭಾರತದಲ್ಲಿ ಮಧ್ವಮತದ ಪ್ರಚಾರಕ್ಕಾಗಿ ಈ ಭಾಗದ ಪಂಡಿತರು ಆಗಮಿಸಬೇಕು. ವೈಷ್ಣವ ಮತ ಪ್ರಚಾರಕ್ಕೆ ಉತ್ತಮ ಅವಕಾಶಗಳಿವೆ. ಉತ್ತರ ಭಾರತದ 500 ಚೈತನ್ಯ ಮಠದಲ್ಲಿ ಶ್ರೀಮಧ್ವಾಚಾರ್ಯರ ಭಾವಚಿತ್ರಗಳಿವೆ. ಆದರೆ, ಅವರ ತತ್ವ ಪ್ರಸಾರ ಆಗಬೇಕಿದೆ ಎಂದು ಪ್ರಯಾಗದ ಉಡುಪಿ ಪಲಿಮಾರು ಶಾಖಾಪೀಠದ ಶ್ರೀ ವಿದ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.

ಐವತ್ತು ದಿನಗಳ ಚಾತುರ್ಮಾಸ್ಯವನ್ನು ನವನಗರದ ಶ್ರೀ ಕೃಷ್ಣ ಮಠದಲ್ಲಿ ಸಂಪನ್ನಗೊಳಿಸುವ ಸಂದರ್ಭದಲ್ಲಿ ಮಂಗಳವಾರ ಚಾತುರ್ಮಾಸ್ಯ ಸಮಿತಿ ಆಯೋಜಿಸಿದ್ದ ಸಮಾರೋಪ ಹಾಗೂ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

17 ವರ್ಷಗಳ ಹಿಂದೆ ನಾನು ಗೃಹಸ್ಥಾಶ್ರಮವನ್ನು ಬಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿದ್ದಾಗ ಪೂರ್ವಾಶ್ರಮದ ಕುಟುಂಬದವರು ರಾಜ್ಯದಲ್ಲಿಯೇ ಸನ್ಯಾಸ ಆಶ್ರಮ ಮಾಡಿ ಉತ್ತರ ಭಾರತ ಬೇಡ ಎಂದಿದ್ದರು. ಆದರೆ, ಇಲ್ಲಿ ವಿದ್ವಾಂಸರು, ಪಂಡಿತರಿಗೆ ಕೊರತೆ ಇಲ್ಲ. ಉತ್ತರ ಭಾರತದಲ್ಲಿ ಈ ಕೊರತೆಯನ್ನು ನಿವಾರಿಸಬೇಕೆಂದು ಸಂಕಲ್ಪ ಮಾಡಿ ಅಲ್ಲಿದ್ದೇನೆ. 200ಕ್ಕೂ ಅಧಿಕ ವೈಷ್ಣವ ಸನ್ಯಾಸಿಗಳಿದ್ದಾರೆ. ಚೈತನ್ಯಮಠದಲ್ಲಿ ಮಧ್ವಾಚಾರ್ಯರ ಭಾವಚಿತ್ರಗಳಿವೆ. ಆದರ, ಗೌರವವಿದೆ. ತತ್ವದ ಪ್ರಸಾರವಾಗುವ ಕೆಲಸವಾಗಬೇಕು. ಇದು ಎಲ್ಲರೂ ಕೂಡಿ ಮಾಡಬೇಕಿರುವ ಕೆಲಸ ಎಂದರು.

ಪಂಡಿತ ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ. ಬಿಂದಾಚಾರ್ಯ ನಾಗಸಂಪಿಗೆ, ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ಬಿ.ಎನ್. ಶ್ರೀನಿವಾಸಾಚಾರ್ಯ, ಅಖಿಲ ಭಾರತ ಮಾಧ್ವಮಹಾಮಂಡಳದ ಗೌರವಾಧ್ಯಕ್ಷ ಸಿ.ಎನ್. ದಾಸ, ಹಿರಿಯ ವಕೀಲ ಕೆ.ಎಸ್. ದೇಶಪಾಂಡೆ, ವಿಜಯೇಂದ್ರಾಚಾರ್ಯ ಯತ್ನಟ್ಟಿ, ರಾಜಾಚಾರ್ಯ ತಾಳಿಕೋಟಿ, ನರಸಿಂಹ ಆಲೂರ, ಹರಿ ಪಾಟೀಲ, ಎಸ್.ವಿ. ಪಂಚಮುಖಿ, ಗಿರಿಯಾಚಾರ್ಯ ಬಾಬು ಜಂಬಗಿ, ನವೀನಾಚಾರ್ಯ ಜೋಶಿ, ಪ್ರಮೋದಾಚಾರ್ಯ ಆಲೂರ, ಸಂತೋಷ ಗದ್ದನಕೇರಿ ಸೇರಿ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಭಕ್ತರಿಂದ ಸಂಗ್ರಹವಾಗಿರುವ 1.15 ಲಕ್ಷ ರೂ., ಶ್ರೀಕೃಷ್ಣ ಮಠದ 15 ಸಾವಿರ ರೂ. ನಿಧಿ ಸಮರ್ಪಣೆ ಮಾಡಲಾಯಿತು.

92ರ ಇಳಿವಯಸ್ಸಿನಲ್ಲಿ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಭಾಗವತ, ಬ್ರಹ್ಮಸೂತ್ರ ಭಾಷ್ಯೆವನ್ನು ಹಿಂದಿ ಭಾಷೆಗೆ ಅನುವಾದಿಸಿ ಮಹಾಭಾರತದ ಹಿಂದಿ ಅನುವಾದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಎರಡು ಪರ್ವ ಮುಗಿದಿದೆ. ಭಗವದ್ಗೀತೆಯನ್ನು ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಉತ್ಸಾಹದ ಅವರ ಧಾರ್ಮಿಕ ನಿಲುವು, ಅಧ್ಯಾತ್ಮದ ಸಾಹಿತ್ಯ ಅಮೋಘವಾದುದು.
- ಪಂ. ಬಿಂದಾಚಾರ್ಯ ನಾಗಸಂಪಿಗೆ, ಬಾಗಲಕೋಟೆ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net