

ವಿಜಯವಾಣಿ ಸುದ್ದಿಜಾಲ ಸುಳ್ಯ
ಪ್ರತಿಯೊಂದು ಕ್ಷೇತ್ರದಲ್ಲಿಂದು ಜಾತಿಗಳ ನಡುವೆ ತಾರತಮ್ಯವೇ ತಾಂಡವಾಡುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಒಗ್ಗಟ್ಟಿನ ನಡೆ ಕಾಣಲು ಸಾಧ್ಯ ಎಂದು ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಸೋಸಿಯೇಟ್ ಸೆಕ್ರೆಟರಿ ಎನ್.ಜಯಪ್ರಕಾಶ್ ರೈ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಅಗಲಿದ ಕೋಟಕ್ಕಲ್ ಆರ್ಯವೈದ್ಯ ಶಾಲಾದ ಪಿ.ವಿ.ಕುಂಞಿರಾಮನ್ ವೈದ್ಯರ್ ಸ್ಮರಣಾರ್ಥ ಸುಳ್ಯ ಪ್ರೆಸ್ಕ್ಲಬ್ನ ಬ್ಯಾಡ್ಮಿಂಟನ್ ಕ್ಲಬ್ ಸದಸ್ಯರಿಗಾಗಿ ಹಮ್ಮಿಕೊಂಡ ಬ್ಯಾಡ್ಮಿಂಟನ್ ಟೂರ್ನಿಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ, ಟೂರ್ನಿ ಪ್ರಾಯೋಜಕ ಪ್ರಶಾಂತ್ಕುಮಾರ್ ಕೋಟಕ್ಕಲ್ ಮುಖ್ಯ ಅತಿಥಿಗಳಾಗಿದ್ದರು. ಎನ್.ಜಯಪ್ರಕಾಶ್ ರೈ, ಅಬ್ದುಲ್ ರಹಿಮಾನ್ ಸಂಕೇಶ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸುಳ್ಯ ಪ್ರೆಸ್ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೈಫ್ ಹಳೆಗೇಟು, ಶ್ರೇಯಸ್ ಹಳೆಗೇಟು, ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ವಿಜೇತರ ವಿವರ
ಲೀಗ್ ಮಾದರಿಯ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸಿದ್ದವು. ಶ್ರೀಧರ ಕಜೆಗದ್ದೆ-ಶಫೀಕ್ ಇದ್ದ ಜಯನಗರ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಸತೀಶ್ ಹೊದ್ದೆಟ್ಟಿ- ಕೌಶಿಕ್ ತಂಡ ದ್ವಿತೀಯ, ಅನಿಲ್ ಕಳಂಜ- ಶಿವಪ್ರಸಾದ್ ಕೇರ್ಪಳ ತಂಡ ತೃತೀಯ ಸ್ಥಾನ ಹಾಗೂ ಪ್ರಶಾಂತ್ ಕೋಟಕ್ಕಲ್- ಈಶ್ವರ ವಾರಣಾಸಿ ತಂಡ ಚತುರ್ಥ ಸ್ಥಾನ ಪಡೆಯಿತು.