

ಬಾಗಲಕೋಟೆ: ಬಾದಾಮಿ ಮತಕ್ಷೇತ್ರದ ವಿವಿಧ ಇಲಾಖೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗೆ ಮಂಜೂರಾದ ಕಾಮಗಾಗಳು ಸರ್ಕಾರದ ಇ ಟೆಂಡರ್ ನಿಯಮಕ್ಕೆ ಅನುಗುಣವಾಗಿ ನಡೆದಿವೆ. ಇದರಲ್ಲಿ ಯಾರ ಹಸ್ತಕ್ಷೇಪವಾಗಿಲ್ಲ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ರೇವಣಸಿದ್ದಯ್ಯ ನೋಟಗಾರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಶಾಸಕರಾಗಿ ಬಂದ ಮೇಲೆ ಕ್ಷೇತ್ರದ ಹಳ್ಳಿಗಳು, ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದಿದೆ. ಬಾದಾಮಿ ಕ್ಷೇತ್ರ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿ ಕಂಡಿದೆ. ಬಾದಾಮಿ ಕ್ಷೇತ್ರಾಭಿವೃದ್ಧಿಗೆ ಅಂದಾಜು ೩೫೦೦ ಕೋಟಿ ರೂ. ಅನುದಾನ ತಂದಿದ್ದಾರೆ. ಆದರೇ ಕೆಲವು ಗುತ್ತಿಗೆದಾರರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ ಎಂದರು.
ಬಾದಾಮಿ ಮತಕ್ಷೇತ್ರದ ಯೋಜನೆಗಳು, ಕಾಮಗಾರಿಗಳು, ಆಗುಹೋಗುಗಳನ್ನು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ನೋಡಿಕೊಳ್ಳುತ್ತಿದ್ದಾರೆ. ಆದರೆ ಅವರ ಹೆಸರು ಕೆಡಿಸಲು ಕೆಲವರು ಇಲ್ಲಸಲ್ಲದ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಹೊಳಬಸು ಶೆಟ್ಟರ್ ಅವರ ವಿರುದ್ಧ ಆರೋಪ ಮಾಡುವವರು ರಾಜಕೀಯ ಹುನ್ನಾರ ಅಡಗಿದೆ ಎಂದು ತಿಳಿಸಿದರು.
ಗುತ್ತಿಗೆದಾರರಾದ ನಾಗೇಶ ಬಂಡಿವಡ್ಡರ್, ಬಸವರಾಜ ಮಾದರ. ರವಿಕುಮಾರ ಮಾದರ, ರಂಗಪ್ಪ, ಕೆ.ಎಚ್.ಅತ್ತಾರ ಇತರರು ಇದ್ದರು.