ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಕಳೆ

9byd-1c
Published on

ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ

ದೇಶ-ವಿದೇಶಗಳಲ್ಲಿ ಕೆಂಪು ಮೆಣಸಿನಕಾಯಿ ಕಂಪನ್ನು ಹರಡಿದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಕ್ತ ಸಾಲಿನಲ್ಲಿ ಆವಕದಲ್ಲಿ ಕೊಂಚ ಇಳಿಮುಖವಾಗಿದ್ದರೂ, ದರ ಏರಿಕೆಯಿಂದ ರೈತರ ಖುಷಿ ಇಮ್ಮಡಿಗೊಂಡಿದೆ.

ಕಳೆದ ವರ್ಷ 19.45 ಕೋಟಿ ರೂ. ಗುರಿ ಪೈಕಿ 15.14 ಕೋಟಿ ರೂ. ಮಾರುಕಟ್ಟೆಯ ಶುಲ್ಕ ಸಂಗ್ರಹಿಸಲಾಗಿತ್ತು. ಪ್ರಸಕ್ತ ವರ್ಷ 18.45 ಕೋಟಿ ರೂ.ಗಳಷ್ಟು ಮಾರುಕಟ್ಟೆ ಶುಲ್ಕ ಸಂಗ್ರಹಿಸುವ ಗುರಿಯಿದೆ. ಆರಂಭದಲ್ಲಿ ಆವಕ ಸ್ವಲ್ಪ ಮಂದಗತಿಯಲ್ಲಿ ಸಾಗಿದ್ದರೂ ದರ ಏರಿಕೆಯಿಂದ ವಹಿವಾಟು ಹೆಚ್ಚಾಗಿ ಶುಲ್ಕ ಸಂಗ್ರಹ ಗುರಿ ತಲುಪುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಗಳು ತಿಳಿಸಿವೆ.

ಡಿಸೆಂಬರ್ ತಿಂಗಳಲ್ಲಿ ವ್ಯತ್ಯಾಸ: 2018-19 ಡಿಸೆಂಬರ್​ವರೆಗೆ ಒಟ್ಟು 5,18,955 ಚೀಲಗಳು ಆವಕವಾಗಿದ್ದವು. ಆದರೆ, 2019-20ರ ಡಿಸೆಂಬರವರೆ 2,11,457 ಚೀಲಗಳು ಮಾತ್ರ ಆವಕವಾಗಿವೆ. ವಿಶೇಷವೆಂದರೆ ಕಳೆದ ಬಾರಿಗಿಂತ ಈ ಬಾರಿ ದರ ಸಾಕಷ್ಟು ಏರಿಕೆ ಕಂಡಿದ್ದು, ವಹಿವಾಟು ಸಮತೋಲನ ಕಾಯ್ದುಕೊಳ್ಳುವ ನಿರೀಕ್ಷೆಯಿದೆ. 2019 ಡಿಸೆಂಬರ್ ಕೊನೆ ವಾರ 49 ಸಾವಿರ ಚೀಲ ಆವಕ, 2020 ಜನವರಿ ಮೊದಲ ವಾರದಲ್ಲಿ 63 ಸಾವಿರಕ್ಕೆ ದಾಟಿದೆ. 2018ರ ಇದೇ ತಿಂಗಳಲ್ಲಿ ಆವಕ ಎರಡು ಬಾರಿ 1 ಲಕ್ಷ ಚೀಲ ದಾಟಿತ್ತು.

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಮೆಣಸಿಕಾಯಿ ಮಳೆಯಾಶ್ರಿತ ಗದಗ, ಕುಂದಗೋಳ, ಅಣ್ಣಗೇರಿ, ಧಾರವಾಡ, ಹುಬ್ಬಳ್ಳಿ ಮುಂತಾದ ಪ್ರದೇಶದಲ್ಲಿ ಒಂದು ಲಕ್ಷ ಹೆಕ್ಟರ್​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದೆ. ಪ್ರಸಕ್ತ ವರ್ಷ ತೀವ್ರ ಮಳೆಯಿಂದಾಗಿ ಶೇ. 50ರಷ್ಟು ಉತ್ಪನ್ನ ಇದೆ ಎನ್ನಲಾಗುತ್ತಿದೆ. ಆದರೆ, ನೀರಾವರಿ ಪ್ರದೇಶಗಳಾದ ಬಳ್ಳಾರಿ, ರಾಯಚೂರು ಹಾಗೂ ಆಂಧ್ರಪ್ರದೇಶದ ಕರ್ನಲ್, ಅಂತೂರು ಬೆಂತೂರು, ಹೊಸಪೇಟೆಯ ಕೆಲ ಪ್ರದೇಶಗಳಲ್ಲಿ ಹಿಂಗಾರು ನೀರಾವರಿ ಬೆಳೆಯಾಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಹೀಗಾಗಿ ಅಲ್ಲಿಂದ ಮಾರ್ಚ್, ಏಪ್ರಿಲ್​ನಲ್ಲಿ ಬ್ಯಾಡಗಿ ಮಾರುಕಟ್ಟೆಗೆ ಬರಲಿದ್ದು, ಆವಕ ಭರ್ಜರಿ ಏರಿಕೆಯಯಾಗುವ ಲಕ್ಷಣಗಳಿವೆ ಎಂದು ಸ್ಥಳೀಯ ವರ್ತಕರು ತಿಳಿಸಿದ್ದಾರೆ.

ಬ್ಯಾಡಗಿ ಡಬ್ಬಿಗೆ ಡಿಮಾಂಡ್: ಬ್ಯಾಡಗಿ ಮಾರುಕಟ್ಟೆ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬ್ಯಾಡಗಿ ಕಡ್ಡಿತಳಿ. ಇದರೊಂದಿಗೆ ಇಲ್ಲಿನ ಡಬ್ಬಿ ತಳಿ ಕೂಡ ಸಾಕಷ್ಟು ಖ್ಯಾತಿ ಪಡೆದಿದೆ. ರುಚಿ, ಬಣ್ಣ ಹಾಗೂ ಗುಣಮಟ್ಟದಲ್ಲಿ ತನ್ನ ಛಾತಿ ಉಳಿಸಿಕೊಂಡ ತಳಿ ಇದಾಗಿದೆ. ಇಲ್ಲಿನ ಡಬ್ಬಿ ಕಾಯಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮಾಂಡಿದೆ. ಪ್ರತಿವರ್ಷವೂ ಡಬ್ಬಿ ತಳಿಯ ಕಾಯಿ ಕ್ವಿಂಟಾಲ್​ಗೆ 10 ಸಾವಿರದಿಂದ 15,599 ರೂ.ದಲ್ಲಿ ಮಾರಾಟವಾದ ದಾಖಲೆಯಿದೆ. ಪ್ರಸಕ್ತ ಸಾಲಿನಲ್ಲಿ 33,259 ರೂ. ಗರಿಷ್ಠ ಬೆಲೆ ಸಿಕ್ಕಿರುವುದು ಮಾರುಕಟ್ಟೆಯ ದಾಖಲೆ ದರವಾಗಿದೆ. ಬ್ಯಾಡಗಿ ಲೋಕಲ್ ಕಡ್ಡಿಗಿಂತಲೂ ಡಬ್ಬಿ ತನ್ನ ಬೇಡಿಕೆ ಹೆಚ್ಚಿಸಿಕೊಂಡಿದೆ. ಹೀಗಾಗಿ ಬಳ್ಳಾರಿ, ಹೊಸಪೇಟೆ ಸೇರಿ ವಿವಿಧ ಕಡೆಯ ರೈತರು ಈ ತಳಿಯನ್ನು ನೀರಾವರಿ ಬೆಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ವಿವಿಧ ಹೊಸ ತಳಿಗಳು ಮಾರುಕಟ್ಟೆ ಪ್ರವೇಶ ಮಾಡುತ್ತಿವೆ.

ನಾಲ್ಕಾರು ವರ್ಷಗಳಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಆನ್​ಲೈನ್ ಟೆಂಡರ್ ಸಿಸ್ಟಂ ಜಾರಿಗೊಂಡಿದೆ. ಇಲೆಕ್ಟ್ರಾನಿಕ್ ತೂಕದ ವ್ಯವಸ್ಥೆ, ದೊಡ್ಡ ಮಟ್ಟದ ಖರೀದಿದಾರರು ಇಲ್ಲಿರುವ ಕಾರಣ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿದೆ. ಗುಣಮಟ್ಟದ ವಹಿವಾಟು ಹಾಗೂ ಸ್ವಚ್ಛತೆ, ಮಾರುಕಟ್ಟೆಗೆ ಮೂಲಸೌಲಭ್ಯಗಳು ಸೇರಿ ಟೆಂಡರ್ ಮುಗಿದ ತಕ್ಷಣ ರೈತರಿಗೆ ಆನ್​ಲೈನ್ ಪೇಮೆಂಟ್ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗಿದೆ. ಹಿಂದಿನ ಬಾರಿ 12ಕ್ಕೂ ಅಧಿಕ ಸಲ ಲಕ್ಷ ಚೀಲ ಹಾಗೂ ಎರಡು ಬಾರಿ 2 ಲಕ್ಷ ಚೀಲ ದಾಟಿತ್ತು. ಪ್ರಸಕ್ತ ವರ್ಷ ಆವಕದಲ್ಲಿ ಇಳಿಕೆಯಿದ್ದರೂ ದುಪ್ಪಟ್ಟು ದರ ಪಡೆದುಕೊಂಡಿದೆ. | ಎಸ್.ಬಿ. ನ್ಯಾಮಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿರೈತರು ಮಾರುಕಟ್ಟೆಗೆ ಮೆಣಸಿನಕಾಯಿ ತರುವಾಗ ನೀರು ಸಿಂಪಡಿಸಿ ತರುತ್ತಿದ್ದು, ಇದರಿಂದ ಬಣ್ಣ, ಗುಣಮಟ್ಟ ಕಳೆದುಕೊಂಡು, ಫಂಗಸ್ ಕೂಡ ಆವರಿಸಲಿದೆ. ಪುನಃ ಚೀಲಗಳನ್ನು ಸುರುವಿ ಒಣಗಿಸಿ ತುಂಬುವ ಕಾರ್ಯದಿಂದ ಸಾಕಷ್ಟು ಹಾನಿ ಉಂಟಾಗಲಿದೆ. ರೈತರು ಮೆಣಸಿನಕಾಯಿಯನ್ನು ನೇರವಾಗಿ ಮಾರುಕಟ್ಟೆಗೆ ತಂದಲ್ಲಿ ಉತ್ತಮ ದರ ಸಿಗಲಿದೆ. ವರ್ತಕರಿಗೂ ಅನುಕೂಲವಾಗಲಿದೆ. ರೈತರು ಹಾಗೂ ವರ್ತಕರು ವಿಶ್ವಾಸ, ನಂಬಿಕೆಗಳು ಮಾರುಕಟ್ಟೆ ಬೆಳವಣಿಗೆ ಕಾರಣವಾಗಿದ್ದು, ರೈತರ ನಿರಂತರ ಸಹಕಾರ ಮುಖ್ಯವಾಗಿದೆ.| ಸುರೇಶಗೌಡ್ರ ಪಾಟೀಲ, ಅಧ್ಯಕ್ಷ ಮೆಣಸಿನಕಾಯಿ ವರ್ತಕರ ಸಂಘ ಸದ್ಯ ಮಾರುಕಟ್ಟೆ ಆವಕ ಏರಿಕೆಯಾಗುತ್ತಿದ್ದು, ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಭರ್ಜರಿ ಆವಕವಾಗಲಿದೆ. ರೈತರು ಗ್ರೇಡ್ ಸಿಸ್ಟಮ್ೆ ಹೊಂದಿಕೊಳ್ಳಬೇಕಿದೆ. ಇಲ್ಲವಾದ್ರೆ ವರ್ತಕರು ನಷ್ಟಕ್ಕೆ ಸಿಲುಕಬೇಕಿದ್ದು, ಗುಣಮಟ್ಟದಿಂದ ಮಾತ್ರ ಬಂಪರ್ ಬೆಲೆ ಲಭ್ಯ. ದೇವಿಹೊಸೂರು ಮೆಣಸಿನಕಾಯಿ ಸಂಶೋಧನೆ ಕೇಂದ್ರ ಬ್ಯಾಡಗಿ ಮೂಲ ತಳಿಯ ಸಂಸ್ಕರಿಸಿದ ರೋಗರಹಿತ ಬೀಜಗಳನ್ನು ಉತ್ಪಾದಿಸುವ ಮಹತ್ವದ ಕಾರ್ಯಕ್ಕೆ ಒತ್ತು ನೀಡಬೇಕಿದೆ. | ರಾಜು ಮೋರಿಗೇರಿ, ವರ್ತಕರು ಬ್ಯಾಡಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net