ಕಾಳು ಮೆಣಸು ಬೆಳೆಗಾರರಿಗೆ ದರಕುಸಿತದ ಬರೆ

ಕಾಳು ಮೆಣಸು ಬೆಳೆಗಾರರಿಗೆ ದರಕುಸಿತದ ಬರೆ
Published on

ಸಕಲೇಶಪುರ: ಕಾಳು ಮೆಣಸು ಧಾರಣೆಯಲ್ಲಿ ನಿತ್ಯ ಕುಸಿತ ಕಂಡು ಬರುತ್ತಿದ್ದು, ವ್ಯಾಪಾರಿಗಳು, ಬೆಳೆಗಾರರನ್ನು ಚಿಂತೆಗೀಡುಮಾಡಿದೆ.
ಮೆಣಸು ಕೂಯ್ಲು ಪ್ರಕ್ರಿಯೆ ಮುಕ್ತಾಯಗೊಂಡು ತಿಂಗಳುಗಳೇ ಕಳೆದರೂ ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಹಾಗೂ ಸ್ಥಳೀಯ ವ್ಯಾಪಾರಿಗಳು ಈಗ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ದರ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟಹೊಂದುವಂತಾಗಿದೆ.
ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಕಾಳು ಮೆಣಸಿನ ದರ ಪ್ರತಿ ಕೆ.ಜಿಗೆ 510 ರಿಂದ 600 ರೂ. ಇತ್ತು. ಏಪ್ರಿಲ್ ನಂತರದಲ್ಲಿ ಕಾಳು ಮೆಣಸು ಧಾರಣೆಯಲ್ಲಿ ನಿಧಾನಗತಿಯಲ್ಲಿ ಏರಿಕೆ ಕಂಡಿದೆ. ಜೂನ್ ವೇಳೆಗೆ ಪ್ರತಿ ಕೆಜಿ ಕಾಳು ಮೆಣಸಿನ ಬೆಲೆ 700 ರೂ. ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಮುಂದಿನ ದಿನಗಳಲ್ಲಿ ದರದಲ್ಲಿ ಇನ್ನು ಏರಿಕೆ ಕಾಣಬಹುದು ಎಂಬ ನಿರೀಕ್ಷೆಯಿಂದ ಬೆಳೆಗಾರರು ಹಾಗೂ ವ್ಯಾಪಾರಿಗಳು ಫಸಲನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಇದೀಗ ಮೆಣಸಿನ ದರ 580, 590 ಕಾಯ್ದುಕೊಂಡಿದ್ದು, ಯಾವುದೇ ಬದಲಾವಣೆ ಇಲ್ಲದೆ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಕಲೇಶಪುರ ತಾಲೂಕಿನಲ್ಲಿ ಬೆಳೆದಿರುವ ಕಾಳು ಮೆಣಸು ಪ್ರಮಾಣದಲ್ಲಿ ಮಾರಾಟವಾಗಿರುವುದಕ್ಕಿಂತ ಹೆಚ್ಚಾಗಿ ಸಂಗ್ರಹಿಸಿಡಲಾಗಿದೆ. ಜೂನ್ ನಂತರದಲ್ಲಿ ನಿರಂತರವಾಗಿ ದರ ಕುಸಿತಕಂಡಿದ್ದು, ಬೆಳೆಗಾರರು ಹಾಗೂ ಸಣ್ಣ ವ್ಯಾಪಾರಿಗಳನ್ನು ಆತಂಕಕ್ಕೀಡುಮಾಡಿದೆ.

ಕಳಪೆ ಕಾಳು ಮೆಣಸು ಪೂರೈಕೆ: ಶ್ರೀಲಂಕಾದಿಂದ ವಿಯೆಟ್ನಾಂ ದೇಶದ ಕಳಪೆ ಕಾಳು ಮೆಣಸು ಒಳನುಸುಳುತ್ತಿರುವುದರಿಂದ ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಮಯನ್ಮಾರ್, ಬಾಂಗ್ಲಾದೇಶ, ಭೂತಾನ್ ನೇಪಾಳ ದೇಶಗಳನ್ನೊಳಗೊಂಡ ಶಾರ್ಕ್ ರಾಷ್ಟ್ರಗಳ ನಡುವೆ ಸಾಂಬಾರ ಪದಾರ್ಥಗಳ ವಿನಿಮಯಕ್ಕೆ ಹೆಚ್ಚಿನ ಶುಲ್ಕವಿಧಿಸುವಂತಿಲ್ಲ ಎಂಬ ನಿಯಮವಿದೆ. ಆದರೆ, ಶ್ರೀಲಂಕಾ ದೇಶ ದಕ್ಷಿಣ ಏಪ್ಯಾದ ಮುಕ್ತ ವ್ಯಾಪಾರ ಸದಸ್ಯ ರಾಷ್ಟ್ರವಾಗಿದ್ದು ತಾನು ಪ್ರತಿನಿಧಿಸುತ್ತಿರುವ ಸಾಪ್ಟ್ ಎಂಬ ಒಕ್ಕೂಟದಲ್ಲಿ ವಿಯೆಟ್ನಾಂ, ಇಂಡೊನೇಷ್ಯಾಗಳಂತಹ ಮೆಣಸು ಬೆಳೆಯುವ ರಾಷ್ಟ್ರಗಳಿವೆ. ಈ ಎರಡು ರಾಷ್ಟ್ರಗಳಲ್ಲಿ ಬೆಳೆಯುವ ಮೆಣಸು ರಾಸಾಯನಿಕ ಯುಕ್ತವಾಗಿದ್ದು, ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಯೂರೋಪ್ ರಾಷ್ಟ್ರಗಳಿಗೆ ರಪ್ತುಮಾಡಲು ಅಸಾಧ್ಯವಾಗಿದೆ. ಇದರಿಂದಾಗಿ ಇಲ್ಲಿನ ಕಳಪೆಗುಣಮಟ್ಟದ ರಾಸಾಯನಿಕಯುಕ್ತ ಮೆಣಸನ್ನು ಶ್ರೀಲಂಕಾ ದೇಶಕ್ಕೆ ಕಡಿಮೆ ದರಕ್ಕೆ ಕಳುಹಿಸಲಾಗುತ್ತಿದ್ದು, ಶ್ರೀಲಂಕಾ ದೇಶ ಇಂಡೋನೇಷ್ಯಾ ಹಾಗೂ ವಿಯಟ್ನಾಂ ದೇಶದಿಂದ ಆಮದುಮಾಡಿಕೊಳ್ಳುವ ಮೆಣಸನ್ನು ನಮ್ಮ ದೇಶದ ಮೆಣಸು ಎಂದು ಭಾರತಕ್ಕೆ ಪ್ರತಿ ಕೆ.ಜಿಗೆ 500 ರೂಗಳಂತೆ ರಫ್ತು ಮಾಡುತ್ತಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕುಸಿಯಲು ಕಾರಣ ಎನ್ನಲಾಗುತ್ತಿದೆ. ಹೀಗೆ ಆಮದು ಮಾಡಿಕೊಳ್ಳುವ ಕಳಪೆ ಗುಣಮಟ್ಟದ ಮೆಣಸನ್ನು ವ್ಯಾಪಾರಿಗಳು ತಮ್ಮ ದೇಶದ ಆಂತರಿಕ ಮಾರುಕಟ್ಟೆಗೆ ಬಿಡುಗಡೆಮಾಡಿ ನಮ್ಮ ದೇಶದ ಅತ್ಯುತ್ತಮ ಗುಣಮಟ್ಟದ ಮೆಣಸನ್ನು ರಪ್ತು ಮಾಡುತ್ತಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ಮೆಣಸನ್ನು ನಾವೇ ಬೆಳೆದರು ನಾವು ಉಪಯೋಗಿಸುತ್ತಿರುವುದು ಕಳಪೆ ಗುಣಮಟ್ಟದ ರಾಸಾಯನಿಕ ಯುಕ್ತ ಮೆಣಸು ಎಂದು ವಿಷಯ ತಜ್ಞ ಕೆಸಗಾನಹಳ್ಳಿ ಸುರೇಂದ್ರ ಹೇಳುತ್ತಾರೆ.

ಆಮದಿನ ವಿರುದ್ಧ ಹೋರಾಟ: ಕರ್ನಾಟಕ ಬೆಳೆಗಾರರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಒಂದಾಗಿ ಕ್ಯಾಪ್ಕೂ ಎಂಬ ಒಕ್ಕೂಟದ ಮೂಲಕ ಕಳಪೆ ಗುಣಮಟ್ಟದ ಮೆಣಸು ದೇಶಕ್ಕೆ ಆಮದಾಗುತ್ತಿರುವ ಬಗ್ಗೆ ಹೋರಾಟ ನಡೆಸಿ ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಿದ್ದರು. ಪರಿಣಾಮ 250 ರಿಂದ 300 ರೂ.ಗಳಿಗೆ ಆಮದಾಗುತ್ತಿದ್ದ ಮೆಣಸಿಗೆ ಸದ್ಯ 500 ರೂ.ಗಳ ದರವನ್ನು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಧರಿಸಿದೆ. ಇದರಿಂದಾಗಿ ಸ್ಥಳೀಯ ಕಾಳು ಮೆಣಸಿನ ದರ ಭಾರಿ ಪ್ರಮಾಣದಲ್ಲಿ ಕುಸಿಯುವುದು ತಪ್ಪಿದಂತಾಗಿದೆ.

ಪ್ರಭಾವಿಗಳು ಶಾಮೀಲು: ಶ್ರೀಲಂಕಾ ದೇಶ ಕಾಳುಮೆಣಸು ಬೆಳೆಯುವ ಪ್ರಮಾಣಕ್ಕಿಂತ ಭಾರತಕ್ಕೆ ಆಮದು ಮಾಡುವ ಪ್ರಮಾಣವೇ ಹೆಚ್ಚಿದೆ. ಇದು ಕೇರಳದ ಕೊಚ್ಚಿಯಲ್ಲಿರುವ ಸಾಂಬಾರ ಮಂಡಳಿಯ ಪ್ರತಿಯೊಬ್ಬ ಹಿರಿಯ ಅಧಿಕಾರಿಗಳಿಗೆ ತಿಳಿದಿದೆ. ಆದರೆ, ಆಮದು ಸಾಲಿನಲ್ಲಿ ಸಾಂಬಾರ ಮಂಡಳಿಯ ನಿವೃತ್ತ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪ್ರಭಾವಿಗಳ ಕೈವಾಡ ಇರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬಾಂತಾಗಿದೆ. ಕಳಪೆ ಗುಣಮಟ್ಟದ ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಬೆಳೆಗಾರ ಸಂಘಟನೆಗಳು ಧ್ವನಿ ಎತ್ತಿದ ವೇಳೆ ಸಾಂಬಾರ ಮಂಡಳಿಯ ನಿವೃತ್ತ ಅಧಿಕಾರಿಗಳ ಸಮಿತಿ ರಚಿಸಿ ಸರ್ಕಾರ ಕೈತೊಳೆದುಕೊಳ್ಳಾಗುತ್ತಿದೆ ಎಂಬ ಮಾತುಗಳು ಬೆಳೆಗಾರರ ವಲಯದಲ್ಲಿ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net