ಸರ್ಕಾರಕ್ಕೆ ಕೆಟ್ಟ ಹೆಸರು ತಂದರೆ ಸಹಿಸಲ್ಲ

MEETIN
ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿರುವುದು.
Published on

ರಾಯಚೂರು: ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಇಲಾಖೆಯ ಕಾರ್ಯಗಳ ಪರಿಶೀಲನೆ ನಡೆಸಬೇಕು. ಇದರಿಂದ ಕೆಳಮಟ್ಟದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.

ಜಿ.ಪಂ. ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಸರ್ಕಾರಕ್ಕೆ ಕೆಟ್ಟ ಹೆಸರು ತಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ಸಮಸ್ಯೆಗಳು ಬರುತ್ತವೆ ಎಂದರು.


ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 5.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಪ್ರಸಕ್ತ ಹಂಗಾಮಿಗೆ 2.25 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಸರಬರಾಜು ಆಗಿದೆ ಎಂದು ತಿಳಿಸಿದರು.


ರಾಜ್ಯದ ಇತರ ಜಿಲ್ಲೆಗಳ ವಾತಾವರಣಕ್ಕೂ ನಮ್ಮ ಜಿಲ್ಲೆಯ ವಾತಾವರಣಕ್ಕೂ ವ್ಯತ್ಯಾಸ ಇದೆ. ಅದಕ್ಕೆ ತಕ್ಕಂತೆ ರೈತರು ಬೇರೆ ಬೇರೆ ಕಂಪನಿಗಳ ಬಿತ್ತನೆ ಬೀಜ ಕೇಳುತ್ತಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಬೇಕು. ರೈತರಿಗೆ ಬೇಡವಾದ ಬಿತ್ತನೆ ಬೀಜ ನೀಡಿದರೆ ಉಪಯೋಗವಿಲ್ಲ ಎಂದು ಸಚಿವ ಬೋಸರಾಜು ತಿಳಿಸಿದರು.

ಬೆಳೆ ವಿಮೆಗೆ ರೈತರು ಕಟ್ಟಿದ ಹಣವೆಷ್ಟು, ಪರಿಹಾರವಾಗಿ ಪಾವತಿಯಾಗಿರುವ ಹಣವೆಷ್ಟು ಎನ್ನುವ ಮಾಹಿತಿಯನ್ನು ನೀಡಬೇಕು. ವಿಮೆ ಯೋಜನೆಯಿಂದ ರೈತರಿಗೆ ಉಪಯೋಗವಿಲ್ಲದಿದ್ದರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು. ಕೃಷಿ ಯಂತ್ರೋಪಕರಣ ವಿತರಣೆ ಬಗ್ಗೆ ಸಾಕಷ್ಟು ದೂರುಗಳಿದ್ದು, ಗುಣಮಟ್ಟ ಕಾಪಾಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜೆಸ್ಕಾಂನಲ್ಲಿ ಪರಿವರ್ತಕಗಳ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿನ ಪರಿವರ್ತಕ ಕೆಟ್ಟರೆ ದುರಸ್ತಿಗೆ ವಿಳಂಬ ಮಾಡಲಾಗುತ್ತಿದ್ದು, ಇದರಿಂದ ಕುಡಿಯುವ ನೀರು ಸರಬರಾಜಿಗೂ ತೊಂದರೆಯಾಗುತ್ತಿದೆ. ಪರಿವರ್ತಕ ದುರಸ್ತಿಗೆ ಗ್ರಾಮಸ್ಥರೇ ಹಣ ಹೊಂದಿಸಿಕೊಂಡು ರಾಯಚೂರಿಗೆ ತಂದು ದುರಸ್ತಿ ಮಾಡಿಸಿಕೊಳ್ಳಬೇಕಾದ ಸ್ಥಿತಿಯಿದೆ.

ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ತಲೆದೋರದಂತೆ ಕ್ರಮಕೈಗೊಳ್ಳಬೇಕು. ಹೆಚ್ಚುವರಿಯಾಗಿ ಪರಿವರ್ತಕಗಳ ದುರಸ್ತಿ ಕೇಂದ್ರವನ್ನು ಆರಂಭಿಸಬೇಕು. ಅರಕೇರಾ ತಾಲೂಕಿನ ಆಲದಮರ ಕ್ಯಾಂಪ್‌ನಲ್ಲಿ ಲೈನ್‌ಮನ್ ಸಾವಿನ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವ ಬೋಸರಾಜು ಸೂಚಿಸಿದರು.

ಡಿಡಿಪಿಐ ವೃಷಭೇಂದ್ರಯ್ಯ ಮಾತನಾಡಿ, ಶಿಕ್ಷಕರ ಹುದ್ದೆಗಳು ಹೆಚ್ಚು ಖಾಲಿಯಿರುವುದರಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಠ್ಯ ಪುಸ್ತಕಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಕೆ ಮಾಡಲಾಗಿದೆ. 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ 35 ಸಾವಿರ ಸಮವಸ್ತ್ರ ಬಂದಿದ್ದು, ಉಳಿದವು ವಾರದಲ್ಲಿ ಬರಲಿವೆ ಎಂದು ಮಾಹಿತಿ ನೀಡಿದರು.


ಶಾಲೆಗಳ ಕೊಠಡಿಗಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಬೇಕು. ಶಾಲೆಗಳಲ್ಲಿ ಛತ್ತು ಬಿದ್ದು ಅನಾಹುತಗಳಾದಲ್ಲಿ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಕೊಠಡಿಗಳ ಕೊರತೆಯಿದ್ದರೆ ಕ್ರಿಯಾ ಯೋಜನೆ ರೂಪಿಸಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಪಡೆದುಕೊಳ್ಳಬೇಕು.

ರಾಯಚೂರು ನಗರಸಭೆಗೆ ಪೂರೈಕೆಯಾಗುವ ಆಲಂ ಪರಿಶೀಲನೆ ನಡೆಸಬೇಕು. ಮಳೆಗಾಲದಲ್ಲಿ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.

ಜನರಿಗೆ ಮೋಸ ಮಾಡುವುದು ಸರಿಯಲ್ಲ

ನಗರದಲ್ಲಿ ವಿಮಾನ ನಿಲ್ದಾಣಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳದೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ಹೇಗೆ ಕೆಲಸದ ಆದೇಶ ನೀಡಿದ್ದೀರಿ ಎಂದು ಸಚಿವ ಎನ್.ಎಸ್.ಬೋಸರಾಜು ಲೋಕೋಪಯೋಗಿ ಇಲಾಖೆ ಇಇ ಚನ್ನಬಸಪ್ಪ ಮೆಕಾಲೆಯನ್ನು ತರಾಟೆಗೆ ತೆಗೆದುಕೊಂಡರು. ವಿಮಾನ ನಿಲ್ದಾಣಕ್ಕೆ 321 ಎಕರೆ ಜಮೀನು ಅಗತ್ಯವಿದ್ದು, ಸರ್ಕಾರಕ್ಕೆ ಸೇರಿದ 300 ಎಕರೆ ಭೂಮಿ ಲಭ್ಯವಿದೆ. ದರ ನಿಗದಿ ಬಗ್ಗೆ ತಕರಾರು ಇರುವ ಕಾರಣ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಿದಾಗ. ನಿಯಮಾವಳಿ ಪ್ರಕಾರ ಜಮೀನು ಲಭ್ಯವಿಲ್ಲದಿದ್ದರೆ ಟೆಂಡರ್ ಕರೆಯಲು ಬರುವುದಿಲ್ಲ. ಗುತ್ತಿಗೆದಾರರು ಅಪೂರ್ಣ ಕಾಮಗಾರಿ ನಡೆಸಿದರೆ ಯಾರು ಹೊಣೆ. ಜನರಿಗೆ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ ಎಂದು ತೋರಿಸಿ ಮೋಸ ಮಾಡುವುದು ಸರಿಯಲ್ಲ ಎಂದು ಬೋಸರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net