More

    ಟೊಮ್ಯಾಟೊ ಬೆಳೆಗಾರನ ಕೈಹಿಡಿಯದ ವಿಮೆ: ಬೆಳೆಕಟಾವು ಪ್ರಯೋಗದಿಂದ ಸಿಕ್ತಿಲ್ಲ ಸಮರ್ಪಕ ವಿಮೆ ಪರಿಹಾರ

    ಕೋಲಾರ: ಇಡೀ ದೇಶದಲ್ಲಿ ಎಲ್ಲೂ ಬೆಳೆಯದಂತೆ ವೈಜ್ಞಾನಿಕ ರೀತಿಯಲ್ಲಿ ಅಚ್ಚುಕಟ್ಟಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ರೈತರು ಟೊಮ್ಯಾಟೊ ಬೆಳೆಯುತ್ತಾರೆ. ತೋಟಗಾರಿಕೆ ಅಧಿಕಾರಿಗಳು, ವಿಜ್ಞಾನಿಗಳು ಸೂಚಿಸುವ ಅತ್ಯಾಧುನಿಕ ತಳಿ ಬಿತ್ತನೆ ಬೀಜಗಳನ್ನು ಬಳಸಿ ಉತ್ತಮ ಇಳುವರಿಯನ್ನೂ ಪಡೆಯುತ್ತಾರೆ. ಆದರೆ ಈ ಅಧಿಕ ಇಳುವರಿ ಪಡೆಯುವುದೇ ರೈತರಿಗೆ ಮುಳುವಾಗಿದೆ. ಸಾವಿರಾರು ರೂ. ವಿಮೆ ಕಂತು ಕಟ್ಟಿದರೂ, ಬೆಳೆ ಸಂಪೂರ್ಣ ನಷ್ಟವಾದರೂ ವಿಮೆ ಪರಿಹಾರ ಪಡೆಯಲಾಗುತ್ತಿಲ್ಲ!


    ಹೌದು, ಪ್ರಧಾನಮಂತ್ರಿ ಫಸಲ್​ಭಿಮಾ ಯೋಜನೆಯಡಿ ಟೊಮ್ಯಾಟೊಗೆ ಬೆಳೆವಿಮೆ ಮಾಡಿಸಲು ಜುಲೈ ಅಂತ್ಯದವರೆಗೆ ಸರ್ಕಾರ ಕಾಲಾವಕಾಶ ನೀಡಿದೆ. ಆದರೆ ಈ ಯೋಜನೆಯಿಂದ ರಾಷ್ಟ್ರದಲ್ಲೇ ಹೆಚ್ಚು ಟೊಮ್ಯಾಟೊ ಬೆಳೆಯುವ ಜಿಲ್ಲೆಯ ಬೆಳೆಗಾರರಿಗೆ ಹೇಳಿಕೊಳ್ಳುವಂತಹ ಪ್ರಯೋಜನವಾಗುತ್ತಿಲ್ಲ. 7 ವರ್ಷದಲ್ಲಿ ಸಾವಿರಾರು ಮಂದಿ ವಿಮೆ ಕಂತು ಕಟ್ಟಿದ್ದರೂ, ಕೆಲವರಿಗೆ ಮಾತ್ರ ವಿಮೆಪರಿಹಾರ ಸಿಕ್ಕಿದೆ. 2016ರಿಂದ 2021ರವರೆಗೆ 5769 ರೈತರು ವಿಮೆ ಕಂತು ಕಟ್ಟಿದ್ದರೂ, 2020ರಲ್ಲಿ 16 ಮತ್ತು 2021ರಲ್ಲಿ 120ಮಂದಿಗೆ ಮಾತ್ರ ಪರಿಹಾರ ಸಿಕ್ಕಿದೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯ ನಿಯಮಗಳು ರೈತರ ಪಾಲಿಗೆ ಕಂಟಕವಾಗಿವೆ.


    ಜಿಲ್ಲೆಯಲ್ಲಿ ವರ್ಷಕ್ಕೆ ಮೂರು ಸೀಸನ್​ನಲ್ಲಿ ಟೊಮ್ಯಾಟೊ ಬೆಳೆಯಲಾಗುತ್ತದೆ. ಹಾಗಾಗಿ ಬಹುವಾರ್ಷಿಕ ಬೆಳೆಯಾದ ಮಾವಿನಂತೆ ಇದು ಹವಾಮಾನ ಆಧಾರಿತ ವಿಮೆ ಯೋಜನೆಗೆ ಬರುವುದಿಲ್ಲ. ನೀರಾವರಿಯಲ್ಲಿ 20ಸಾವಿರ ಹೆಕ್ಟೇರ್​ನಲ್ಲಿ ಟೊಮ್ಯಾಟೊ ಬೆಳೆಯುವ ರೈತರು 11ಲಕ್ಷ ಟನ್​ ಇಳುವರಿ ಪಡೆಯುತ್ತಿದ್ದಾರೆ. ಜಿಲ್ಲೆಯ 27ಹೋಬಳಿಗಳಲ್ಲಿ ಶ್ರೀನಿವಾಸಪುರ ತಾಲೂಕಿನ ಎಲ್ಲ ಹೋಬಳಿಗಳು, ಬೂದಿಕೋಟೆ, ರಾರ್ಬಟ್​ಸನ್​ಪೇಟೆ ಹೋಬಳಿಗಳನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 5 ವರ್ಷದ ಸರಾಸರಿ ಇಳುವರಿಗಿಂತ ವಿಮೆ ಮಾಡಿಸಿದ ವರ್ಷ ಬೆಳೆ ಕಟಾವು ಪ್ರಯೋಗದ ಇಳುವರಿ ಎಷ್ಟು ಕಡಿಮೆ ಇರುತ್ತದೆಯೋ ಅಷ್ಟಕ್ಕೆ ಈ ಇಳುವರಿ ಆಧಾರಿತ ಯೋಜನೆಯಲ್ಲಿ ವಿಮೆ ಪರಿಹಾರ ಸಿಗುತ್ತದೆ. ಜಿಲ್ಲೆಯಲ್ಲಿ ಇಳುವರಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಹೆಕ್ಟೇರ್​ಗೆ ಸರಾಸರಿ 58ಟನ್​ ಇಳುವರಿಯಿದೆ. ವೈಯಕ್ತಿಕವಾಗಿ 70ರಿಂದ 80ಟನ್​ ಇಳುವರಿ ಪಡೆಯುವ ರೈತರೂ ಇದ್ದಾರೆ. ಇದೇ ಕಾರಣಕ್ಕಾಗಿ ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ರೈತರಿಗೆ ವಿಮೆ ಪರಿಹಾರ ಸಿಗುತ್ತಿಲ್ಲ.


    ರೈತರು ಮುಂಗಾರು ಹಂಗಾಮಿನಲ್ಲಿ ಟೊಮ್ಯಾಟೊ ಬೆಳೆದು ಪ್ರತಿವರ್ಷ ಮಳೆಗೆ ಬೆಳೆ ಕಳೆದುಕೊಂಡು ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಸೂಕ್ಷ್ಮ ಬೆಳೆಯಾದ ಟೊಮ್ಯಾಟೊಗೆ ವಾರಪೂರ್ತಿ ಮಳೆ ಸುರಿದರೆ ಸಾಕು ಎಕರೆಗೆ 2-3ಲಕ್ಷ ರೂ. ರೈತನ ಕೈಕಚ್ಚುವುದು ಗ್ಯಾರಂಟಿ. ಪರಿಸ್ಥಿತಿ ಹೀಗಿದ್ದರೂ ವಿಮೆ ಕಂತು ಪಾವತಿಸಲು ರೈತರಿಗೆ ಅವಕಾಶ ಮಾಡಿಕೊಟ್ಟು ರೈತರನ್ನು ಮತ್ತಷ್ಟು ದಿವಾಳಿ ಮಾಡಲಾಗುತ್ತಿದೆ. ಬೆಳೆ ಹಾಳಾದರೆ 1.18 ಲಕ್ಷ ರೂ. ವಿಮೆ ಪರಿಹಾರ ಕೈಹಿಡಿಯುತ್ತದೆ ಎಂದು ರೈತರು ಪ್ರತಿವರ್ಷ ಬ್ಯಾಂಕ್​ಗಳ ಮೂಲಕ ವಿಮೆ ಕಂತು 5900ರೂ. ಪಾವತಿಸುತ್ತಿದ್ದಾರೆ.


    ವಿಮೆ ಪರಿಹಾರ ಸಿಗುವುದು ಮರೀಚಿಕೆ ಎಂಬುದು ಅರ್ಥವಾದ ನಂತರ ಕಡಿಮೆ ರೈತರು ವಿಮೆಕಂತು ಕಟ್ಟುತ್ತಿದ್ದಾರೆ. ಹಣಕಟ್ಟಿ ಕಳೆದುಕೊಂಡಿದ್ದು, ಬಿಟ್ಟರೆ ವಿಮಾ ಯೋಜನೆಯಿಂದ ಪ್ರಯೋಜನವಿಲ್ಲ ಎನ್ನುತ್ತಾರೆ ರೈತರು.


    ಪ್ರಧಾನಮಂತ್ರಿ ಫಸಲ್​ಭಿಮಾಗೆ ರಾಗಿ ಮತ್ತಿತರ ಕೃಷಿ ಬೆಳೆಗಳ ಜತೆ ಟೊಮ್ಯಾಟೊ ಸಹ ಒಳಪಟ್ಟಿದೆ. ಇದಕ್ಕೆ ಬೆಳೆ ಕಟಾವು ಪ್ರಯೋಗಗಳ ಮಾನದಂಡ ಆಧಾರವಾಗಿದೆ. ಕೆಲವು ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಇರುವುದರಿಂದ ಅಲ್ಲಿನ ರೈತರು ವಿಮೆಪರಿಹಾರ ಪ್ರತಿವರ್ಷ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಹವಾಮಾನ ಆಧಾರಿತ ವಿಮೆಯೋಜನೆಗೆ ಸೇರಿಸಲು ಹಲವು ತಾಂತ್ರಿಕ ತೊಡಕುಗಳಿವೆ. ಫಸಲ್​ಭಿಮಾವನ್ನೇ ಮುಂದುವರಿಸಿದರೆ ರೈತರು ಇದರಿಂದ ದೂರವಾಗಿ ಯೋಜನೆ ಮತ್ತು ಉದ್ದೇಶ ವಿಲವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

    ಮಾವಿಗೆ ಪ್ರತಿವರ್ಷ ಸಿಗುತ್ತಿದೆ ವಿಮೆ:
    ಜಿಲ್ಲೆಯ ಮತ್ತೊಂದು ಪ್ರಮುಖ ತೋಟಗಾರಿಕಾ ಬೆಳೆಯಾದ ಮಾವು ಹವಾಮಾನ ಆಧಾರಿತ ವಿಮೆ ಹೊಂದಿದ್ದು ಪ್ರತಿವರ್ಷ ರೈತರಿಗೆ ಕ್ಲೆಮ್​ ಸಿಗುತ್ತಿದೆ. ವರ್ಷಕ್ಕೆ 3 ರಿಂದ 4 ಕೋಟಿ ರೂ. ವಿಮೆಮೊತ್ತ ರೈತರಿಗೆ ಸಂದಾಯವಾಗುತ್ತಿದೆ. 2016ರಿಂದ ಇಲ್ಲಿ ತನಕ 30 ಕೋಟಿಗೂ ಹೆಚ್ಚು ಹಣ ರೈತರಿಗೆ ನೇರ ಸಿಕ್ಕಿದೆ. ಕಳೆದ ವರ್ಷ 5800 ಅರ್ಜಿ ಸಲ್ಲಿಕೆಯಾಗಿದ್ದು, ಈ ಬಾರಿ 680 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಳಿ, ಮಳೆ, ರೋಗ ಹೆಚ್ಚಾಗಿ ಉತ್ಪನ್ನ ನಷ್ಟವಾದರೆ ನಿಗದಿತ ವಿಮೆ ಸಿಗುತ್ತದೆ. ಹೆಕ್ಟೇರ್​ಗೆ 4 ಸಾವಿರ ರೂ. ವಿಮೆ ಕಂತು ಪಾವತಿಸಿದರೆ ಇಳುವರಿ ಸಂಪೂರ್ಣ ನಾಶವಾದರೆ 80 ಸಾವಿರ ರೂ. ಸಿಗುತ್ತದೆ.

    2021ರಲ್ಲಿ ಜಿಲ್ಲೆಯ 20ಹೋಬಳಿಗಳ 321ರೈತರು ವಿಮೆ ಕಂತು ಕಟ್ಟಿದ್ದು, 13 ಹೋಬಳಿಗಳ 120 ಮಂದಿಗೆ 38 ಲಕ್ಷ ರೂ. ವಿಮೆ ಪರಿಹಾರ ಸಿಕ್ಕಿದೆ. ಏಳು ಹೋಬಳಿಗಳಲ್ಲಿ ಬೆಳೆ ಕಟಾವು ಪ್ರಯೋಗದಲ್ಲಿ ಹೆಚ್ಚು ಇಳುವರಿ ದಾಖಲಾಗಿದ್ದರಿಂದ ಆ ರೈತರಿಗೆ ಸಿಕ್ಕಿಲ್ಲ. ವಿಮೆ ಕಂತು ಕಟ್ಟಿಸಿಕೊಂಡಿದ್ದ ಯೂನಿವರ್ಸೆಲ್​ಸೋಂಪ್​ ಸಂಸ್ಥೆ ಜತೆ ಜಿಲ್ಲಾಡಳಿತ 2 ಬಾರಿ ಸಭೆ ನಡೆಸಿತ್ತು. ಇದೀಗ ಪರಿಹಾರ ಬಿಡುಗಡೆ ಮಾಡಿದೆ

    |ಎಸ್​.ಆರ್​.ಕುಮಾರಸ್ವಾಮಿ, ತೋಟಗಾರಿಕೆ ಉಪನಿರ್ದೇಶಕರು, ಕೋಲಾರ.

    ಕೇಂದ್ರ ಒಂದು ಜಿಲ್ಲೆಗೆ ಒಂದು ಬೆಳೆ ಯೋಜನೆಯಡಿ ಟೊಮ್ಯಾಟೊ ಆಯ್ಕೆ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೇ ಒಂದು ಸಂಸ್ಕರಣಾ ಘಟಕವಿಲ್ಲ. ನೆರೆಯ ಚಿತ್ತೂರು, ತಮಿಳುನಾಡಿನ ಘಟಕಗಳನ್ನೇ ನಾವಿನ್ನೂ ಅವಲಂಬಿಸಬೇಕಿದೆ. ಫಸಲ್​ ಭಿಮಾ ಯೋಜನೆಗೆ ಹೆಚ್ಚು ಟೊಮ್ಯಾಟೊ ಬೆಳೆಯುವ ಶ್ರೀನಿವಾಸಪುರ ಮತ್ತು ಕೆಲವು ಹೋಬಳಿಗಳನ್ನು ಬೆಳೆಹಾನಿಯಾದರೆ ಹೆಚ್ಚು ಪರಿಹಾರ ಕೊಡಬೇಕಾಗುತ್ತದೆ ಎಂದು ಯೋಜನೆಯಿಂದ ಕೈಬಿಡಲಾಗಿದೆ. ವಿಮಾ ಸಂಸ್ಥೆ ಹಗಲು ದರೋಡೆ ಮಾಡುತ್ತಿದೆ. ಅಧಿಕಾರಿವರ್ಗ, ಸರ್ಕಾರ ಅದರ ಬೆಂಬಲಕ್ಕಿದೆ.
    | ಚಂದ್ರಶೇಖರ್​, ಪ್ರಗತಿಪರ ರೈತ, ನೀಲಟೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts